ಇತಿಹಾಸವನ್ನು ಬರೆಯುವವರು ಜನರೇ ಎಂದು ಮತ್ತೊಮ್ಮೆ ಸಾಬೀತಾಗಿದೆ. ಹೋರಾಟ ನಡೆಯುತ್ತಿದೆ. ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಹೆಚ್ಚಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುತ್ತೇವೆ ಎಂದು ಘೋಷಿಸಿಲ್ಲ. ಕಾರಣ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಕಾಯಿದೆ ರೂಪಿಸಬೇಕು.
– ಹೆಚ್.ಜಿ. ಉಮೇಶ್, ಪ್ರಗತಿಪರ ಮುಖಂಡ
ದಾವಣಗೆರೆ, ನ.19- ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸಂಜೆ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವಿಜಯೋತ್ಸವ ಆಚರಿಸಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ವಿವಿಧ ಪ್ರಗತಿಪರ ಸಂಘಟನೆಗಳು, ಮಳೆಯನ್ನದೇ ನೆನೆಯುತ್ತಾ, ಕೊಡೆಗಳ ಆಶ್ರಯ ಪಡೆದು ವಿಜಯೋತ್ಸವ ಆಚರಿಸಿದವು. ಇದು ರೈತ ಚಳುವಳಿಯಲ್ಲೇ ಚಾರಿತ್ರ್ಯಿಕ ವಿಜಯ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರಗತಿಪರ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್, ರಾಜ್ಯದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಕೂಡ ಮುಖ್ಯ ಭಾಗವಾಗಿದ್ದು, ಸಂಯುಕ್ತ ಕಿಸಾನ್ ಮೋರ್ಚಾ ಪತಾಕೆಯಡಿ ನಡೆದ ರೈತ ಚಳುವಳಿ ಈ ವಿಜಯಕ್ಕೆ ವಿಶ್ವವ್ಯಾಪಿ ಮಹತ್ವವಿದೆ. ಇದು 600 ಹುತಾತ್ಮ ರೈತರು ಜೀವ ಕೊಟ್ಟು ಗಳಿಸಿದ ವಿಜಯ. ಅವರ ಪರಿಶ್ರಮದಾಯಕ ಹೋರಾಟ, ಬಲಿದಾನ ಗಳಿಂದ ಗಳಿಸಿದ ವಿಜಯ. ಇದರಲ್ಲಿ ಹುತಾತ್ಮ ರೈತ ರಿಗೆ ಹೃದಯದಾಳದ ಶ್ರದ್ಧಾಂಜಲಿಗಳು ಎಂದರು.
ಮತ್ತೋರ್ವ ಮುಖಂಡ ಡಾ.ಟಿ.ಎಸ್.ಸುನೀತ್ಕುಮಾರ್ ಮಾತನಾಡಿ, ದೇಶದ ಎಲ್ಲೆಡೆ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ಈ ಕೂಡಲೇ ಹಿಂಪಡೆಯಬೇಕು. ಜತೆಗೆ ರೈತರ ಚಳುವಳಿಯ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆಯಾಗಿಲ್ಲ. ತಕ್ಷಣವೇ ಕ್ರಮ ಕೈಗೊಂಡು ಕಾನೂನು ಅಡಿಯಲ್ಲಿ ಶಿಕ್ಷಿಸಬೇಕು. ಅಲ್ಲದೇ ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಬಲ್ಲೂರು ರವಿಕುಮಾರ್, ತೇಜಸ್ವಿ ಪಟೇಲ್, ಮಂಜುನಾಥ್ ಕೈದಾಳೆ, ಮಧು ತೊಗಲೇರಿ, ಸತೀಶ ಅರವಿಂದ್, ಅಂಜಿನಪ್ಪ ಅನಿಸ್ಪಾಷಾ, ಆದಿಲ್ಖಾನ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.