ಸೆ.1ರಿಂದ ಆಟೋಗಳಿಗೆ ಮೀಟರ್

ದಾವಣಗೆರೆ, ಆ.17- ನಗರದಲ್ಲಿ ಆಟೋ ಪ್ರಯಾಣ ದರ ಮೊದಲ 2 ಕಿ.ಮೀಗೆ ಕನಿಷ್ಠ ದರ 30 ರೂ. (ಮೂವರು ಪ್ರಯಾಣಿಕರಿಗೆ)  ನಂತರ ಪ್ರತಿ 1 ಕಿ.ಮೀಗೆ 15 ರೂ.ಗಳಿಗೆ ನಿಗದಿಪಡಿಸ ಲಾಗಿದ್ದು, ಸೆ.1ರಿಂದಲೇ ಪರಿಷ್ಕೃತ ಪ್ರಯಾಣ ದರ ಜಾರಿಗೆ ಬರಲಿದೆ.

ರಾತ್ರಿ 10ರಿಂದ ಬೆಳಿಗ್ಗೆ 5ಗಂಟೆಯವರೆಗೆ ದರದ ಒಂದೂವರೆ ಪಟ್ಟು ಹಣವನ್ನು ಪ್ರಯಾಣಿಕರು  ನೀಡಬೇಕು. ಮೊದಲ 15 ನಿಮಿಷ ಕಾಯುವಿಕೆಗೆ ಯಾವುದೇ ದರ ಇಲ್ಲ. ಆದರೆ ನಂತರದ 15 ನಿಮಿಷಗಳವರೆಗೆ 5 ರೂ. ಹಾಗೂ 20 ಕೆ.ಜಿ. ಲಗೇಜು ಉಚಿತ. ನಂತರದ 20 ಕೆಜಿಗೆ 5 ರೂ.ಗಳನ್ನು ನಿಗದಿಪಡಿಸಲಾಗಿದೆ.

ಬರುವ ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಆಟೋಗಳಿಗೆ ಮೀಟರ್ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್, ಗ್ರೀಸ್ ಆಯಿಲ್ ಹಾಗೂ ವಾಹನದ ಬಿಡಿ ಭಾಗಗಳು ಹಾಗೂ ಟೈರ್ ಬೆಲೆ ಹೆಚ್ಚಳವಾಗಿರುವುದರಿಂದ ದರ ಪರಿಷ್ಕರಣೆಗೆ ಆಟೊ ಚಾಲಕರು ಸಲ್ಲಿಸಿದ್ದ ಮನವಿಯ ಮೇರೆಗೆ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್‌ ಹಾಗೂ ತಾಲ್ಲೂಕು ಫೆಡರೇಷನ್ ಆಫ್ ಕರ್ನಾಟಕ ಆಟೋ ಯೂನಿಯನ್ (ಸಿಐಟಿಯು) ಅಧ್ಯಕ್ಷ ಅಣ್ಣಪ್ಪಸ್ವಾಮಿ ಹಾಗೂ ಆಟೋರಿಕ್ಷಾ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.‌

ಜಿಲ್ಲೆಯ ಎಲ್ಲಾ ಆಟೋ ಚಾಲಕ, ಮಾಲೀಕರು ತಮ್ಮ ಆಟೋಗಳಿಗೆ ಅನುಮತಿ ಇರುವ ಫ್ಲಾಗ್ ಮೀಟರ್‌ಗಳನ್ನು ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಆಗಸ್ಟ್ 31ರೊಳಗೆ ರಿಕ್ಯಾಲಿಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ಸೆಪ್ಟೆಂಬರ್‌ಗೆ ಪರಿಷ್ಕರಿಸಿದ ಮೀಟರ್‌ ದರವನ್ನು ಪ್ರಯಾಣಿಕರಿಂದ ಪಡೆಯಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆಟೋ ಚಾಲಕರು, ಮಾಲೀಕರು ಮತ್ತು ಮಾಲೀಕರು ನಾಗರಿಕರಿಗೆ ಉತ್ತಮ ಸೇವೆ ಒದಗಿಸಬೇಕು ಹಾಗೂ ಪ್ರಯಾಣಿಕರನ್ನು ಗೌರವದಿಂದ ಕಾಣಬೇಕು. ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆದವರಿಗೆ, ಅನಧಿಕೃತ ಇಂಧನ (ಗ್ಯಾಸ್, ಸಿಲಿಂಡರ್, ಸೀಮೆಎಣ್ಣೆ) ಬಳಸುವವರಿಗೆ ದಂಡ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಆಟೋರಿಕ್ಷಾ ಮಾಲೀಕರು, ಚಾಲಕರು ಡಿಎಲ್, ವಾಹನದ ನೋಂದಣಿ, ಅರ್ಹತಾ ಪತ್ರ, ವಿಮಾ ಪತ್ರ, ವಾಯುಮಾಲಿನ್ಯ ಪ್ರಮಾಣ ಪತ್ರಗಳನ್ನು ರಿಕ್ಷಾದ ಚಾಲಕರ ಆಸನದ ಹಿಂಭಾಗ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

error: Content is protected !!