ಒಳಜಗಳದಿಂದಲೇ ನಾಶವಾಗುತ್ತದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್
ದಾವಣಗೆರೆ, ನ. 18 – ರಾಜ್ಯದಲ್ಲಿ ಕಾಂಗ್ರೆಸ್ ಐ.ಸಿ.ಯು.ನಲ್ಲಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಒಳಜಗಳದಿಂದಾಗಿ ಆ ಪಕ್ಷ ನಾಶವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ಥಳೀಯ ಸಂಸ್ಥೆಗಳ ಮೂಲಕ ಪರಿಷತ್ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜನ ಸ್ವರಾಜ್ ಅಭಿಯಾನ ಆರಂಭಿಸಲಾಗಿದೆ.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭ್ರಮೆಯಿಂದ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಸೆಣಸಾಟ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ನದ್ದು ಮುಗಿದ ಅಧ್ಯಾಯ ಎಂದು ಶೆಟ್ಟರ್ ಹೇಳಿದರು.
ಮೊನ್ನೆ ನಡೆದ ಸಭೆಯಲ್ಲಿ §ಡಿ.ಕೆ. – ಡಿ.ಕೆ.’ ಎಂಬ ಘೋಷಣೆಯಿಂದ ಸಿದ್ದರಾಮಯ್ಯ ಭಾಷಣ ಮಾಡಲು ಬಿಡಲಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಸಿಟ್ಟಿಗೆದ್ದು ಸಭಾತ್ಯಾಗ ಮಾಡಿ, ಈಗ ಸಬೂಬು ಹೇಳುತ್ತಿದ್ದಾರೆ. ಇವರ ಒಳಜಗಳದಿಂದ ಕಾಂಗ್ರೆಸ್ ನಾಶವಾಗಲಿದೆ ಎಂದವರು ತಿಳಿಸಿದರು.
ಪಂಜಾಬ್ನಲ್ಲಿ ಒಬ್ಬ ಸಿಧು ಇದ್ದರೆ, ಕರ್ನಾಟಕದಲ್ಲೂ ಇನ್ನೊಬ್ಬ ಸಿಧು ಇದ್ದಾರೆ. ಇವರಿಬ್ಬರಿಂದ ಕಾಂಗ್ರೆಸ್ ಕುಸಿಯುತ್ತಿದೆ. ಕಾಂಗ್ರೆಸ್ ಮುಗಿದ ಅಧ್ಯಾಯವಾಗಿದ್ದರೆ, ಬಿಜೆಪಿ ಇಂದಿನ ಹಾಗೂ ಭವಿಷ್ಯದ ಪಕ್ಷ ಎಂದವರು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಪರಿಷತ್ ಸದಸ್ಯರ ಕೊರತೆ ಇದೆ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಪಕ್ಷದ ಸದಸ್ಯರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದವರು ತಿಳಿಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಇಂದಿರಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲದಲ್ಲಿದ್ದ ಜೈ ಹಿಂದ್ ಘೋಷಣೆ ಬಿಟ್ಟು ಈಗ ಜಾತಿಗಳನ್ನು ಒಡೆಯುವ ಅಹಿಂದ ಘೋಷಣೆ ಕೂಗಲಾಗುತ್ತಿದೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ ಎಂದರು.
ಅಭ್ಯರ್ಥಿ ಘೋಷಿಸಿದ ಎಸ್ವಿಆರ್ !
ಪರಿಷತ್ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ವರಿಷ್ಠರು ಇನ್ನೂ ಅನುಮತಿ ನೀಡಿಲ್ಲ. ಅಷ್ಟರಲ್ಲೇ ಕೆ.ಎಸ್. ನವೀನ್ ಅವರು ಬಿಜೆಪಿಯ ಪರಿಷತ್ ಚುನಾವಣಾ ಅಭ್ಯರ್ಥಿ ಎಂದು ಶಾಸಕ ಎಸ್.ವಿ. ರಾಮಚಂದ್ರ ಘೋಷಿಸಿದ್ದಾರೆ!
ಕಳೆದ ಎರಡು ಚುನಾವಣೆಗಳಲ್ಲಿ ಸೋತಿದ್ದ ನವೀನ್, ಆ ನೋವಿಗೆ ಸಿಲುಕದೇ ಈ ಬಾರಿಯೂ ಜಗಳೂರು ಕಡೆ ಪ್ರಚಾರ ಮಾಡುತ್ತಿದ್ದಾರೆ. ಅವರು ಈ ಬಾರಿ ಗೆಲ್ಲಲಿದ್ದಾರೆ ಎಂದು ರಾಮಚಂದ್ರ ಹೇಳಿದರು. ಅಭ್ಯರ್ಥಿ ಹೆಸರು ಇನ್ನೂ ಅಂತಿಮವಾಗಿಲ್ಲ ಎಂದು ಸಭೆಯಲ್ಲಿದ್ದವರು ಹೇಳಿದಾಗ, ಬಾಯಿ ಹರಕೆಯಿಂದ ಅವರೇ ಅಭ್ಯರ್ಥಿಯಾಗಲಿ ಎಂದು ಪ್ರತಿಕ್ರಿಯಿಸಿ ದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತ್ತು.
ಮೋದಿ ಎರಡು ಅಲೆಗಳನ್ನು ನಿಯಂತ್ರಿಸಿದ್ದಾರೆ: ಶೆಟ್ಟರ್
ಮುಂದುವರೆದ ದೇಶಗಳಲ್ಲಿ ಕೊರೊನಾದ ಹಲವಾರು ಅಲೆಗಳು ಬರುತ್ತಿವೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಬಂದ ಎರಡು ಕೊರೊನಾ ಅಲೆಗಳನ್ನು ನಿಯಂತ್ರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಪ್ರೋತ್ಸಾಹ ಕೊಟ್ಟು, ದೇಶದಲ್ಲೇ ಲಸಿಕೆ ಉತ್ಪಾದನೆ ಮಾಡಿಸಿ, ಇಡೀ ದೇಶದಲ್ಲಿ ಲಸಿಕೆ ಹಾಕಿಸುವ ಕೆಲಸ ಪ್ರಧಾನ ಮಂತ್ರಿಯಿಂದ ಆಗಿದೆ.
ಪ್ರತಿ ಲಸಿಕೆಗೆ 750 ರೂ.ಗಳಿಗೂ ಹೆಚ್ಚು ವೆಚ್ಚವಾಗುತ್ತದೆ. ಮೋದಿ ಸರ್ಕಾರದಲ್ಲಿ ಇಡೀ ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ. ಇಲ್ಲಿಯವರೆಗೆ 100 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಲಸಿಕೆ ಕೊಡಲಾಗಿದೆ. ಮೋದಿ ಅವರಿಂದಾಗಿ ನಾವು ನಿರಾಳವಾಗಿ ಇರಲು ಸಾಧ್ಯವಾಗಿದೆ. ಆದರೂ, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಬಿಡಬಾರದು ಎಂದವರು ತಿಳಿಸಿದರು.
ಬಲವಂತದ ಮತಾಂತರ ತಡೆ, ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿಯಂತಹ ಮಸೂದೆಗಳನ್ನು ಜಾರಿಗೆ ತರಬೇಕಾದರೆ, ಪರಿಷತ್ನಲ್ಲಿ ಬಿಜೆಪಿ ಬಹುಮತ ಬೇಕಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಗೆಲುವು ಸಾಧಿಸುವ ಮೂಲಕ ಪರಿಷತ್ತಿನಲ್ಲಿ ಬಹುಮತ ಗಳಿಸಬೇಕಿದೆ ಎಂದವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಎಂ.ಆರ್.ಐ. ಉಪಕರಣ ಶೀಘ್ರದಲ್ಲೇ ಬರಲಿದೆ. ಹದಿನೈದು ದಿನಗಳಲ್ಲಿ ಡಯಾಲಿಸಿಸ್ಗೆ ಅಗತ್ಯವಾಗಿರುವ ಔಷಧಿಗಳ ಕೊರತೆ ನೀಗಿಸಲಾಗುವುದು. ಮಳೆಯಿಂದ ತೋಟ – ಕೃಷಿ ಬೆಳೆಗೆ ಆಗಿರುವ ಹಾನಿಯ ಸಮಗ್ರ ವರದಿ ಪಡೆದು ಪರಿಹಾರ ಕಲ್ಪಿಸಲಾಗುವುದು. ಮೆಕ್ಕೆಜೋಳ – ಭತ್ತದ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಪರಿಷತ್ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಪರಿಷತ್ ಚುನಾವಣೆಯಲ್ಲಿ ಗೆಲ್ಲಲೇಬೇಕಿದೆ. ಈ ಚುನಾವಣೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳನ್ನು ಪರಿಷತ್ನಲ್ಲಿ ಪ್ರಸ್ತಾಪಿಸಲು ನಡೆಸಲಾಗುತ್ತಿರುವ ಚುನಾವಣೆ ಎಂದರು.
ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಈ ಬಾರಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬಿಜೆಪಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.
ವೇದಿಕೆಯ ಮೇಲೆ ಅಬಕಾರಿ ಸಚಿವ ಗೋಪಾಲಯ್ಯ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಮೇಯರ್ ಎಸ್.ಟಿ. ವೀರೇಶ್, ಬಯಲು ಸೀಮೆ ನಿಗಮದ ಅಧ್ಯಕ್ಷ ಅಣಬೇರು ಜೀವನಮೂರ್ತಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರಾದ ಸುಧಾ ಜಯರುದ್ರೇಶ್, ಬಸವರಾಜನಾಯ್ಕ, ಬಿ.ಪಿ. ಹರೀಶ್, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಸ್ವಾಗತಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ನಿರೂಪಿಸಿದರು.