ಕಲೆ ಆಸ್ವಾದನೆ, ಕಲೆಗೆ ವೇದಿಕೆ ಮುಖ್ಯ

ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ

ದಾವಣಗೆರೆ, ನ. 18 – ಕಲಾವಿದರಿಗೆ ಪ್ರೋತ್ಸಾಹಿಸಿ, ಅವರ ಕಲೆಗೆ ವೇದಿಕೆ ಕೊಡುವ ಜೊತೆಗೆ, ಕಲೆಯನ್ನು ಆಸ್ವಾದಿಸುವುದು ಹಾಗೂ ಗ್ರಹಿಸುವುದು ಮಹತ್ವದ್ದಾಗಿದೆ ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಹೇಳಿದ್ದಾರೆ.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಕಲಬುರಗಿಯ ಕಲಾವಿದೆ ಜಲಜಾಕ್ಷಿ ಪಿ. ಕುಲಕರ್ಣಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರದರ್ಶನ ಆಯೋಜಿಸಲಾಗಿದೆ. ನ.20ರವರೆಗೆ ಚಿತ್ರ ಪ್ರದರ್ಶನ ಇರಲಿದೆ.

ಪ್ರತಿಯೊಂದು ಕಲೆಯೂ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ನಿರಂತರ ಪ್ರೋತ್ಸಾಹ ಕೊಡುತ್ತಾ ಬರಲಾಗಿದೆ ಎಂದವರು ಹೇಳಿದರು.

ಪ್ರತಿಯೊಬ್ಬ ಕಲಾವಿದರಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದರ ಪ್ರದರ್ಶನಕ್ಕೆ ಅವಕಾಶ ಕೊಟ್ಟರೆ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ಸಿಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತಂದು, ಅದನ್ನು ಶ್ರೇಷ್ಠತೆಗೆ ತೆಗೆದುಕೊಂಡು ಹೋಗುವ ಹೊಣೆ ಬೋಧಕರ ಮೇಲಿದೆ ಎಂದವರು ಕಿವಿಮಾತು ಹೇಳಿದರು.

ಗುಣಮಟ್ಟದ ಶಿಕ್ಷಣ ಬಹಳ ಮುಖ್ಯವಾಗಿದ್ದು, ಇದರಿಂದ ದೇಶ ಬೆಳೆಯುತ್ತದೆ. ಗುಣಮಟ್ಟದ ಶಿಕ್ಷಣ ಇರದೇ ಹೋದರೆ ದೇಶ ಉಳಿಯುವುದಿಲ್ಲ ಎಂದು ಹಲಸೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲಾವಿದೆ ಜಲಜಾಕ್ಷಿ, ಕಲೆಗೆ ವೇದಿಕೆ ಬೇಕೆಂದು ಕಾಯುತ್ತಾ ಕೂರದೇ, ನಮ್ಮ ಪ್ರತಿಭೆಯನ್ನೇ ವೇದಿಕೆ ಮಾಡಿಕೊಳ್ಳಬೇಕು. ಕಲಾಸಕ್ತರು ಯಾವ ರೀತಿ ಕಲೆಯನ್ನು ಆಸ್ವಾದಿಸುತ್ತಾರೆ ಹಾಗೂ ವಿಮರ್ಶೆ ಮಾಡುತ್ತಾರೆ ಎಂಬುದನ್ನು ಕಲಾವಿದರು ಮುಖ್ಯವಾಗಿ ಪರಿಗಣಿಸಬೇಕು ಎಂದರು.

ಪ್ರಕೃತಿ ಹಾಗೂ ಪ್ರಾಣಿ – ಪಕ್ಷಿಗಳು ತಮ್ಮ ಚಿತ್ರಕಲೆಯ ಕೇಂದ್ರ ಬಿಂದುವಾಗಿವೆ. ನವ್ಯ ಶೈಲಿಯಲ್ಲಿ ರೇಖಾ ವರ್ಣ, ಅಕ್ರೋಲಿಕ್, ಮಿಕ್ಸಡ್ ಮೀಡಿಯಾ ಮುಂತಾದ ಶೈಲಿಗಳಲ್ಲಿ ಚಿತ್ರ ರಚನೆ ಮಾಡಿರುವುದಾಗಿ ಅವರು ಹೇಳಿದರು.

ಕಲಾ ವಿಭಾಗದ ವಿದ್ಯಾರ್ಥಿಗಳು ಅಲ್ಪ ತೃಪ್ತರಾಗದೇ ಉನ್ನತ ಹಂತದವರೆಗೆ ಕಲಿಕೆಯಲ್ಲಿ ತೊಡಗಬೇಕು. ಕಲಾಕೃತಿಗಳ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಬೆಳವಣಿಗೆಯ ವೇದಿಕೆ ಸಿಗುತ್ತದೆ ಎಂದವರು ತಿಳಿಸಿದರು.

ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ ಅವರು ಸ್ವಾಗತಿಸಿದರು.

ಮಧು ಮತ್ತು ಹೇಮಲತ ಪ್ರಾರ್ಥಿಸಿದರೆ, ಉಪನ್ಯಾಸಕ ದತ್ತಾತ್ರೇಯ ಭಟ್ ನಿರೂಪಿಸಿದರು.

error: Content is protected !!