ಜಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಹರ್ಷ
ಜಗಳೂರು, ಆ.15- ಕೊರೊನಾ ಮಹಾಮಾರಿ ಅಲೆ ಮಧ್ಯೆಯೂ ಕ್ಷೇತ್ರದಲ್ಲಿ ಹಲವು ಕೋಟಿ ರೂ ವೆಚ್ಚದ ಶಾಶ್ವತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಪಟ್ಟಣದ ಗುರುಭವನದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ತಾಲ್ಲೂಕಿನ 57 ಕೆರೆ ತಂಬಿಸುವ 660 ಕೋಟಿ ರೂ.ಗಳ ಯೋಜನೆ, ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಕಾಮಗಾರಿ ಭರದಿಂದ ಸಾಗಿದೆ. 1,338 ಕೋಟಿ ರೂಗಳ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಮಂಜೂರಾಗಿದ್ದು. 46 ಸಾವಿರ ಎಕರೆಗೆ ಹನಿ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 133 ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳು ಹಾಗೂ ಜಿಪಂ ಇಂಜಿನಿಯರಿಂಗ್ ಇಲಾಖೆಯಲ್ಲಿ 20 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಜಲಜೀವನ್ ಮಿಷನ್ ಯೋಜನೆ ಅಡಿ 270 ಕೋಟಿ ರೂ ಕ್ರಿಯಾ ಯೋಜನೆ ಮಂ ಜೂರಾಗಿದೆ. 75 ಹಳ್ಳಿಗಳಿಗೆ ನಳಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಮುಂದಿನ ವರ್ಷದಲ್ಲಿ 75 ಹಳ್ಳಿಗಳಿಗೆ ನೀರು ಒದಗಿಸಲಾ ಗುತ್ತದೆ ಎಂದು ಶಾಸಕರು ತಿಳಿಸಿದರು.
ಕೈಗಾರಿಕೀಕರಣ ಅಭಿವೃದ್ಧಿಗೆ ಬಗ್ಗೇನಹಳ್ಳಿ ಬಳಿ 9.36 ಎಕರೆ ಪ್ರದೇಶದಲ್ಲಿ ಜಾಗ ನಿಗದಿ ಯಾಗಿದ್ದು, ಎಸ್.ಟಿ ನಿಗಮ ಮಂಡಳಿಯಿಂದ 200 ಜನ ಪರಿಶಿಷ್ಟ ವರ್ಗದ ಮಹಿಳೆಯರಿಗೆ ತರಬೇತಿ ಹಾಗೂ ಉಚಿತ ಹೊಲಿಗೆ ಯಂತ್ರ ವಿತರಿಸಿ, ಬಡ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.
2.5 ಕೋಟಿ ರೂ. ವೆಚ್ಚದಲ್ಲಿ ರಂಗಮಂದಿರ ಸಜ್ಜಾಗುತ್ತಿದ್ದು, ಕೋವಿಡ್-19 ಇಳಿಮುಖದ ನಂತರ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಆಯೋಜಿಸಿ, ಕ್ರೀಡಾಭಿಮಾನಿಗಳ ಮನರಂಜಿಸ ಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಡಾ. ನಾಗವೇಣಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ, ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಸರ್ಕಾರದ ಆದೇಶದಂತೆ ಬೆಳೆ ವಿಮೆ ಖಾತೆಗೆ ಜಮಾ ಮಾಡಲಾಗುವುದು. ನೀರಾವರಿ ಯೋಜನೆಗಳು ಸಾಕಾರಗೊಂಡಿವೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅಗ್ರಸ್ಥಾನ ಪಡೆದ ಭೂಮಿಕಾ, ಶಾಂತೇಶ್, ವಿನುತಾ ಮೂರು ಜನ ವಿದ್ಯಾರ್ಥಿಗಳಿಗೆ ಶಾಸಕರು ತಲಾ ಹತ್ತು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ಮಾಜಿ ಸೈನಿಕರಾದ ಪ್ರಸನ್ನ, ಶೇಖರಪ್ಪ, ರಂಗಸ್ವಾಮಿ, ಸಿದ್ದಣ್ಣ ಅವರನ್ನು ಹಾಗೂ ಪೌರ ಸೇವಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪ.ಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಾ ಶಿವಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿದ್ದೇಶ್, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ತಾ.ಪಂ ಇಓ ಲಕ್ಷ್ಮೀಪತಿ, ಸಿಪಿಐ ಮಂಜುನಾಥ್ ಪಂಡಿತ್, ಬಿಇಓ ದಾರುಕಾನಂದ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮತ್ತಿತರರು ಭಾಗವಹಿಸಿದ್ದರು.