ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಮುಂದುವರೆದ ಅಶೋಕ್‌ ಗೌಡ

ಕಾಂಗ್ರೆಸ್‌ನಲ್ಲಿನ ಭಿನ್ನಮತ ; ಅವಿಶ್ವಾಸ ಗೊತ್ತುವಳಿಗೆ ಸೋಲು

ಹರಪನಹಳ್ಳಿ, ಆ.16- ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತದಿಂದ ಇಲ್ಲಿನ ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯಾಗಿ, ಕೋರ್ಟ್ ತಡೆಯಾಜ್ಞೆಯಿಂದ ಪದೇ ಪದೇ ಮುಂದಕ್ಕೆ ಹೋಗಿದ್ದ  ಅವಿಶ್ವಾಸ ಸಭೆ, ಕೊನೆಗೂ ಸದಸ್ಯರ ಗೈರು ಹಿನ್ನೆಲೆಯಲ್ಲಿ ಸೋಲುಂಟಾಗಿ ಅಧ್ಯಕ್ಷರಾಗಿ ಅಶೋಕಗೌಡ ಮುಂದುವರೆದ ಘಟನೆ ಸೋಮವಾರ ಜರುಗಿತು.

ಒಟ್ಟು 15 ನಿರ್ದೇಶಕರಲ್ಲಿ 15 ಜನರೂ ಸಭೆಗೆ  ಗೈರಾದರು. ಎಪಿಎಂಸಿಗೆ ಚುನಾವಣೆ ನಡೆದಾಗ 15 ನಿರ್ದೇಶಕರಲ್ಲಿ 14 ಜನ ನಿರ್ದೇಶಕರು ಕಾಂಗ್ರೆಸ್ ಪಕ್ಷದವರಾಗಿದ್ದರು, ಒಂದು ಮಾತ್ರ ಬಿಜೆಪಿಯಾಗಿತ್ತು. 

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಸೂತ್ರದಂತೆ ನಿಗದಿತ ಅವಧಿಗೆ ಒಬ್ಬರಂತೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾ ಬರಲಾಯಿತು.

ನಂದಿಬೇವೂರಿನ ಅಶೋಕ್ ಎಂಬುವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದಾಗ ಆರು ತಿಂಗಳು ಆದ ನಂತರ ರಾಜೀನಾಮೆ ನೀಡಲು ಮುಖಂಡರು ಸೂಚಿಸಿದರು. ಆಗ ಅಶೋಕಗೌಡ ಅವರು ಬೇರೆಯವರಿಗೆ 10 ತಿಂಗಳು ಅವಕಾಶ ನೀಡಿ ನನಗೆ ಏಕೆ 6 ತಿಂಗಳು ಎಂದು ಪ್ರಶ್ನಿಸಿ ರಾಜೀನಾಮೆ ನೀಡದೆ ಅಧ್ಯಕ್ಷರಾಗಿ ಮುಂದುವರೆದರು.

ಇದರಿಂದ ಸಿಟ್ಟಿಗೆದ್ದ ಮುಖಂಡರು, ತಮ್ಮ ನಿರ್ದೇ ಶಕರಿಂದ ಅವಿಶ್ವಾಸ ಮಂಡಿಸಿದರು. ಆಗ ಅಧ್ಯಕ್ಷ ಅಶೋಕಗೌಡ ಅವರು ಹೈಕೋರ್ಟ್‌ಗೆ ತೆರಳಿ ಅವಿಶ್ವಾಸಕ್ಕೆ ತಡೆಯಾಜ್ಞೆ ತಂದರು. 3 ಬಾರಿ ಅವಿಶ್ವಾಸಕ್ಕೆ  ಕೋರ್ಟ್‌ನಿಂದ ತಡೆಯಾಜ್ಞೆ ತಂದು ಮುಂದುವರೆದರು.

ಅಂತಿಮವಾಗಿ ಸೋಮವಾರ §ಮರಳಿ ಯತ್ನವ ಮಾಡು¬ ಎಂಬಂತೆ ಪುನಃ ಸದಸ್ಯರು ಅವಿಶ್ವಾಸ ಮಂಡಿಸಿದರು. ಆದರೆ 15 ಜನ ನಿರ್ದೇಶಕರೂ ಸಭೆಗೆ ಗೈರಾಗಿದ್ದರಿಂದ ಮತ್ತೆ 4ನೇ ಬಾರಿಗೆ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಯಿತು.

ಐದೂವರೆ ತಿಂಗಳು ಅವಧಿ ಮಾತ್ರ ಉಳಿದಿದ್ದು, ನಂತರ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಬಾರಿ ಅವಿಶ್ವಾಸ ತಿರಸ್ಕೃತವಾದರೆ 6 ತಿಂಗಳು ಮತ್ತೆ ಮಂಡಿಸಲು ಬರುವುದಿಲ್ಲ. ಹಾಗಾಗಿ ಅಧ್ಯಕ್ಷ ಅಶೋಕಗೌಡ ಅಧ್ಯಕ್ಷರಾಗಿ ಉಳಿದ ಅವಧಿಯನ್ನು ಪೂರ್ಣಗೊಳಿಸುವುದರಲ್ಲಿ ಎರಡು ಮಾತಿಲ್ಲ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಚಂದ್ರಶೇಖರಪ್ಪ ಎಂಬುವವರು ಬೇಸರಿಸಿಕೊಂಡು ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆಯನ್ನು ಪ್ರಭಾರಿ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್‌ ನಂದೀಶ್‌ ಅವರು ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಸಭೆಗೆ ಯಾವೊಬ್ಬ ಸದಸ್ಯರೂ ಹಾಜರಾಗದ ಹಿನ್ನೆಲೆಯಲ್ಲಿ  ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ ಎಂದು ತಿಳಿಸಿದರು. 

ಒಟ್ಟಾರೆ ಎಪಿಎಂಸಿ ಹಾಗೂ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ  ಗೊಂದಲ ಹಾಗೆ ಮುಂದುವರೆದಿದೆ.      

error: Content is protected !!