ದಾವಣಗೆರೆ, ಆ.13 – ಕೋವಿಡ್ನಂತಹ ಪರಿಸ್ಥಿತಿಯಲ್ಲಿ ಸಂಘಟಿತ, ಅಸಂಘಟಿತ, ವಲಸೆ ಕಾರ್ಮಿಕರು ತೊಂದರೆಗೆ ಒಳಗಾಗಿದ್ದನ್ನು ಮನಗಂಡ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಮುಖಾಂತರ ಆಹಾರ ಧಾನ್ಯಗಳ ಕಿಟ್ಟನ್ನು ವಿತರಿಸುತ್ತಿದ್ದು, ನೊಂದ ವರ್ಗಕ್ಕೆ ಕೊಂಚ ಮಟ್ಟಿನ ಅನುಕೂಲವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
ನಗರದ ಶ್ರೀನಿವಾಸ ನಗರದಲ್ಲಿನ ಪಾರ್ಕ್ನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಹೊರ ರಾಜ್ಯದ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಕಾರ್ಮಿಕ ಇಲಾಖೆಯು ಇಂತಹ ಕಾರ್ಮಿಕರನ್ನು ಹುಡುಕಿ ಅವರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿದೆ ಎಂದ ಅವರು, ಕಾನೂನು ಸೇವಾ ಪ್ರಾಧಿಕಾರದಿಂದ ತೊಂದರೆಗೊಳಗಾದ ಎಲ್ಲಾ ವರ್ಗದ ಜನರಿಗೆ ಕಾನೂನು ನೆರವು ಸಿಗಲಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್ ಮಾತನಾಡಿ, ಸರ್ಕಾರದಿಂದ ನೀಡಲ್ಪಟ್ಟ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯು ತೊಂದರೆಗೊಳಗಾದ ಜನರ ನೆರವಿಗೆ ಬಂದಿದೆ. ಎಲ್ಲಾ ವರ್ಗದ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಿದೆ. ಕಳೆದ ಒಂದು ತಿಂಗಳಿಂದ ನೊಂದವರಿಗೆ ಸ್ಪಂದಿಸಿಸುತ್ತಿದ್ದು, ಇಂತಹ ಕಾರ್ಯಗಳು ಹೆಚ್ಚು ಹೆಚ್ಚಾಗಿ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂಸಾಬ್, ಕಾಮಗಾರಿ ಮುಖ್ಯಸ್ಥ ವಿ.ಕೆ.ಎನ್.ಮೂರ್ತಿ ಹಾಗೂ ಇತರರು ಇದ್ದರು.