ವಿಜ್ಞಾನ ಶಿಕ್ಷಕರ ಕಾರ್ಯಾಗಾರದಲ್ಲಿ ಪ್ರೊ. ಎಸ್. ಹಾಲಪ್ಪ ಅಭಿಮತ
ದಾವಣಗೆರೆ, ಮಾ.27- ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುತ್ತಾರೆ. ಹಾಗಾಗಿ ಶಿಕ್ಷಕರಿಗೆ ನಿರಂತರ ಕಲಿಕೆ ಅವಶ್ಯಕ ಎಂದು ನೂತನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಹಾಲಪ್ಪ ತಿಳಿಸಿದರು.
ಅವರು, ನಗರದ ಬಿಐಇಟಿ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೆಮಿನಾರ್ ಹಾಲ್ ನಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿ, ದಾವಣಗೆರೆ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಮತ್ತು ಶಿಕ್ಷಕ ಇಬ್ಬರೂ ಏಕಕಾಲಕ್ಕೆ ರೂಪಿತವಾಗಿದ್ದು, ನಿರಂತರ ಕಲಿಕೆಯಲ್ಲಿ ಇದ್ದವರೇ ಅತ್ಯುತ್ತಮ ಶಿಕ್ಷಕರು. ಇಂತಹ ಶಿಕ್ಷಕರು ಉನ್ನತ ವಿದ್ಯಾರ್ಥಿಯನ್ನು ರೂಪಿಸಬಲ್ಲರು ಎಂದು ಹೇಳಿದರು.
ಮನುಷ್ಯನಿಗೆ ಸಹಜ ಯೋಚನೆಯ ಕಲ್ಪನೆ, ಕುತೂಹಲ ಕಲ್ಪಿಸಿಕೊಡುವವರೇ ಶಿಕ್ಷಕರು. ಆವಿಷ್ಕಾರ, ಕುತೂಹಲ ಕೆರಳಿಸುವ ಮನೋಧರ್ಮವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಯಟ್ ಉಪನಿರ್ದೇಶಕ ಹೆಚ್.ಕೆ. ಲಿಂಗರಾಜು ಮಾತನಾಡಿ, ವಿದ್ಯಾರ್ಥಿ ನಿರಂತರ ಜಾನಾರ್ಥಿಯಾಬೇಕು, ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಬೇಕು. ಆಗ ಅನುಭವ ಹೆಚ್ಚಾಗಿ ಪರಿಪೂರ್ಣತೆ ಕಾಣಲು ಸಾಧ್ಯ. ಶಿಕ್ಷಕರಿಗೆ ಬೋಧನೆಯ ಅಭ್ಯಾಸವಿದ್ದಾಗ ಘನತೆ, ಗೌರವ ಸಿಗಲಿದೆ ಎಂದು ಕಿವಿಮಾತು ಹೇಳಿದರು.
ಯಾವುದೇ ಕಲೆ ಸಾರ್ಥಕತೆ ಪಡೆಯಬೇಕಾದರೆ ಅದರ ಹಿಂದೆ ಸಾಕಷ್ಟು ಪರಿಶ್ರಮ ಇರಬೇಕು. ನಮ್ಮ ಜ್ಞಾನ ಬೆಳವಣಿಗೆ ಆಗಬೇಕಾದರೆ ನಮಗೆ ತಿಳಿದಿರುವ ವಿಷಯ ಅಷ್ಟೇ ಬೋಧನೆ ಮಾಡಿದರೆ ಸಾಲದು ಬೇರೆ ಮೂಲಗಳಿಂದ ಜ್ಞಾನವನ್ನು ಪಡೆಯಬೇಕೆಂದರು.
ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿಯ ಪರಿವೀಕ್ಷಕಿ ಆರ್. ಅಂಜಲಿ ಮಾತನಾಡಿ, ಒಳ್ಳೆಯ ಪ್ರತಿಭೆ ಹೊರಹೊಮ್ಮದಿದ್ದರೆ, ಸಮಾಜಕ್ಕೆ ಉಪಯುಕ್ತವಾಗದಿದ್ದರೆ ಪ್ರಯೋಜನವಾಗದು. ಪ್ರತಿಭೆ ಆಸಕ್ತಿ ಮೇಲೆ ನಿಂತಿದೆ. ಮಕ್ಕಳಿಗೆ ಪೋಷಕರಿಗಿಂತ ಶಿಕ್ಷಕರ ಮಾತೇ ವೇದವಾಕ್ಯ. ಅವರೇ ಮಕ್ಕಳಿಗೆ ಹಿರೋಗಳು. ಶಿಕ್ಷಕರು ಮಕ್ಕಳಲ್ಲಿ ಬೆಳೆಸುವ ಆಸಕ್ತಿ ದೀರ್ಘ ಕಾಲಿಕ ಪರಿಣಾಮ ಬೀರುತ್ತದೆ. ಬೆಳೆಯುವ ಹಂತದಲ್ಲೇ ಪ್ರಾಯೋಗಿಕ ಕಲಿಕೆ ಮಕ್ಕಳಿಗೆ ಪಠ್ಯದ ಅನುಭವ ಹೆಚ್ಚಿಸಲಿದೆ. ಮಕ್ಕಳಿಗೆ ಪ್ರೋತ್ಸಾಹ, ಕುತೂಹಲ ಕೆರಳಿಸುವ ಘಟನೆಗಳಿಂದ ಜ್ಞಾನದ ಕಡೆ ಕರೆತರಬಹುದು ಎಂದರು.
ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಹಿಂದಿನ ಶಿಕ್ಷಣಕ್ಕಿಂತ ಈಗಿನ ಶಿಕ್ಷಣದಲ್ಲಿ ನಿರಂತರ ಬದಲಾವಣೆ ಕಾಣಲಾಗುತ್ತಿದ್ದು, ಇದಕ್ಕೆ ಶಿಕ್ಷಕರೇ ಕಾರಣರು. ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪಠ್ಯ ಕ್ರಮಕ್ಕೆ ತಕ್ಕಂತೆ ಶಿಕ್ಷಕರು ತರಬೇತಿ ಪಡೆಯುವುದು ಅವಶ್ಯಕತೆ ಇದೆ. ಮಕ್ಕಳಿಗೆ ಪ್ರಸ್ತುತತೆಯ ಪಠ್ಯ ಬೋಧಿಸುವ ಮುನ್ನ ಶಿಕ್ಷಕರು ತಯಾರಾಗಬೇಕು ಎಂದ ಅವರು, ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಆದರೆ ಪರಿಣಿತರ ಸಂಖ್ಯೆ ಕ್ಷೀಣಿಸಿದ್ದು, ಪ್ರಸ್ತುತ ಪರಿಣಿತರ ಅವಶ್ಯವಿದೆ ಎಂದರು.
ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಇ. ಬಸವರಾಜಪ್ಪ, ದಾವಣಗೆರೆ ವಿಜ್ಞಾನ ಪರಿಷತ್ತಿನ ನಿಕಟ ಪೂರ್ವ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಹಾಗೂ ಮತ್ತಿತರರಿದ್ದರು.