ಸರ್ಕಾರಿ ಸಿಬ್ಬಂದಿಗಳ ಧ್ವಜ ವಂದನಾ ಕಾರ್ಯಾಗಾರದಲ್ಲಿ ಡಿಎಸ್‌ಪಿ ಪ್ರಕಾಶ್
ದಾವಣಗೆರೆ, ಆ. 12 – ಧ್ವಜಾರೋಹಣ ಹಾಗೂ ಅವರೋಹಣ ದೇಶದ ನಾಗರಿಕರಿಗೆ ಹೆಮ್ಮೆ ಹಾಗೂ ಗುರು ತರ ಜವಾಬ್ದಾರಿ. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದನ್ನು ಹೆಚ್ಚು ಜನರು ಕಲಿಯಬೇಕಿದೆ ಎಂದು ಡಿಎಸ್‌ಪಿ ಪಿ.ಬಿ.ಪ್ರಕಾಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ಭಾರತ ಸೇವಾ ದಳಗಳ ಸಂಯುಕ್ತಾಶ್ರಯದಲ್ಲಿ ಸಶಸ್ತ್ರ ಮೀಸಲು ಪಡೆ ಉಪಾಧೀಕ್ಷಕರ ಕಚೇರಿಯ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಧ್ವಜ ವಂದನಾ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಇಲಾಖೆಗಳ ಸಿಬ್ಬಂದಿಗಾಗಿ ಈ ಕಾರ್ಯಗಾರ ಆಯೋಜಿಸಲಾಗಿದೆ. ಸಿಬ್ಬಂದಿಯೊಬ್ಬರು ಧ್ವಜಾರೋಹಣ ಹಾಗೂ ಅವರೋಹಣ ಕಲಿತರೆ ಕಚೇರಿಯ ಎಲ್ಲರಿಗೂ ಕಲಿಸಬಹುದು ಎಂದು ಹೇಳಿದರು.
ಸಾಕಷ್ಟು ಬಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಧ್ವಜಾರೋಹಣ ಮಾಡಲು ಗೊತ್ತಿರದೇ ಪರದಾಡುವ ಘಟನೆಗಳು ನಡೆದಿವೆ. ಅಂತಹ ಘಟನೆಗಳು ತಪ್ಪಬೇಕಿದ್ದು, ಎಲ್ಲರೂ ಧ್ವಜಾರೋಹಣದ ಬಗ್ಗೆ ತಿಳಿಯಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸೇವಾ ದಳದ ದಾವಣಗೆರೆ ವಿಭಾ ಗದ ಸಂಘಟಕ ಅಣ್ಣಯ್ಯ, ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಧ್ವಜ ವಂದನಾ ಕಾರ್ಯಾಗಾರ ಆಯೋಜಿಸಿ ರುವುದು ಸ್ವಾಗತಾರ್ಹ ಎಂದರು.
ಇದುವರೆಗೂ ಖಾಸಗಿಯಾಗಿ ಜನರು ಧ್ವಜಾರೋಹಣದ ಬಗ್ಗೆ ಕಲಿಯುತ್ತಿದ್ದರು. ಈಗ ಸರ್ಕಾರದ ಪರವಾಗಿಯೇ ಧ್ವಜ ವಂದನೆಯ ಬಗ್ಗೆ ಕಲಿಯಲು ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ಆರ್‌ಪಿಐ ಕಿರಣ್ ಕುಮಾರ್, ಪಿಎಸ್‌ಐ ಸಂಗಮೇಶ್, ಚನ್ನಪ್ಪ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.