ಮಲೇಬೆನ್ನೂರು, ಮಾ.27- ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವ ಶನಿವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಶ್ರೀ ಬೀರಲಿಂಗೇಶ್ವರ, ಜಿ. ಬೇವಿನಹಳ್ಳಿ ಮತ್ತು ಯಲವಟ್ಟಿ ಗ್ರಾಮಗಳ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ನೆರವೇರಿದ ರಥೋತ್ಸಕ್ಕೆ ವಿವಿಧ ಕಲಾಮೇಳಗಳು ಮೆರಗು ತಂದವು.
ಜಿಗಳಿ, ಜಿ. ಬೇವಿನಹಳ್ಳಿ, ಯಲವಟ್ಟಿ, ಕುಂಬಳೂರು, ಭಾನುವಳ್ಳಿ, ಮಲೇಬೆನ್ನೂರು ಸೇರಿದಂತೆ, ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಕೊರೊನಾ ನೆರಳಲ್ಲೂ ಭಯವಿಲ್ಲದೆ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಎಎಸ್ಐ ಬಸವರಾಜಪ್ಪ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಪಿಡಿಓ ದಾಸರ ರವಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕಂದಾಯ ಇಲಾಖೆಯ ರಂಗನಾಥ್ ಹಾಜರಿದ್ದು, ಜನರಿಗೆ ಮಾಸ್ಕ್ ಧರಿಸುವಂತೆ ಹೇಳಿದರು. ರಥೋತ್ಸವದ ನಂತರ ದೇವಸ್ಥಾನದಲ್ಲಿ ವಿವಿಧ ಹರಕೆ ಸೇವೆಗಳು ನಡೆದವು.
ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಮತ್ತು ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗ್ರಾಮದ ಯುವಕರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಯಿತು. ಭಾನುವಾರ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ಕ್ಕೆ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಭೂತ ಸೇವೆ ಇರುತ್ತದೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಲಿದೆ.