ದಾವಣಗೆರೆ, ಆ.11- ಜೂನ್, ಜುಲೈ ತಿಂಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನಗರದಲ್ಲಿ ಮೊನ್ನೆ ಬಿಸಿಯೂಟ ತಯಾರಕರು ಪ್ರತಿಭಟನಾ ಧರಣಿ ನಡೆಸಿದರು.
ತಾಲ್ಲೂಕು ಕಚೇರಿ ಎದುರು ಕೆಲ ಕಾಲ ಧರಣಿ ಹೂಡಿದ್ದ ಪ್ರತಿಭಟನಾಕಾರರು, ನಂತರ ತಹಶೀಲ್ದಾರ್ ಗಿರೀಶ್ ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದರು.
ಫೆಡರೇಷನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಅನುದಾನಿತ ಮತ್ತು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆಯವರಿಗೆ ಕ್ರಮವಾಗಿ 2700 ರೂ. ಹಾಗೂ 2600 ರೂ. ಗೌರವ ಸಂಭಾವನೆ ನೀಡಲಾಗುತ್ತಿದೆ. ಆದರೆ, ಕೋವಿಡ್ ಸಂದರ್ಭದಲ್ಲಿ ಈ ಸಂಭಾವನೆ ಸಿಗದ ಕಾರಣಕ್ಕೆ ಈ ಮಹಿಳೆಯರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲಿಟ್ಟರು.
ಈ ಅತ್ಯಲ್ಪ ಸಂಭಾವನೆಯಲ್ಲಿ ಈ ದುಬಾರಿ ಜಗತ್ತಿನಲ್ಲಿ ಜೀವನ ನಡೆಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಗೌರವ ಧನ ಹೆಚ್ಚಿಸಬೇಕು. ಬಿಸಿಯೂಟ ತಯಾರಕರಿಗೆ ಜೂನ್, ಜುಲೈ ತಿಂಗಳ ಬಾಕಿ ಇರುವ ವೇತನವನ್ನು ಪಾವತಿಸಬೇಕು. ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಇತರೆ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಿದಂತೆ ಇವರಿಗೂ ತಲಾ 5 ಸಾವಿರ ರೂ. ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ಫೆಡರೇಷನ್ನ ಮುಖಂಡರಾದ ಸಿ. ರಮೇಶ್, ಪದ್ಮಾ, ಜ್ಯೋತಿಲಕ್ಷ್ಮಿ, ಇಂದ್ರಮ್ಮ, ಎಂ.ಎನ್. ಮಂಜುಳ, ಗೀತಾ, ಮಂಜಮ್ಮ, ಸಾಕಮ್ಮ, ರುದ್ರಮ್ಮ, ಪ್ರೇಮಲೀಲಾ, ಜಯಲಕ್ಷ್ಮಿ ಸೇರಿದಂತೆ, ಇತರರು ಭಾಗವಹಿಸಿದ್ದರು.