ಸಿ.ಟಿ.ರವಿ ಉದ್ಧಟತನದ ಹೇಳಿಕೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಖಂಡನೆ
ರಾಣೇಬೆನ್ನೂರು, ಆ.16- ದೇಶದ ಸ್ವಾತಂತ್ರ್ಯಕ್ಕಾಗಿ 35 ವರ್ಷ ಹೋರಾಟ ಮಾಡಿ, 9 ವರ್ಷ ಸೆರೆಮನೆಯಲ್ಲಿದ್ದ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವುದು, ಸ್ವಾತಂತ್ರ್ಯ ಸಿಗಲು ಮಹಾತ್ಮ ಗಾಂಧಿ ಕಾರಣರಲ್ಲ ಎನ್ನುವ ಸಿ.ಟಿ ರವಿ ಅವರ ಮಾತುಗಳು ಉದ್ಧಟತನದಿಂದ ಕೂಡಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಹೇಳಿದರು.
ನಿನ್ನೆ ಇಲ್ಲಿ ಕಾಂಗ್ರೆಸ್ ಕಛೇರಿಯ ನೂತನ ಕಟ್ಟಡ ಕೆ.ಬಿ.ಕೋಳಿವಾಡ ಸಭಾ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದವರನ್ನು ಕಡೆಗಣಿಸಿ ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆದುಕೊಳ್ಳುವ, ಕಾನೂನು ರಚಿಸುವ ಬಿಜೆಪಿ ಆಡಳಿತದಿಂದ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ಬಿಜೆಪಿ ಹಾಗೂ ಸಿ.ಟಿ.ರವಿ ಅಂತವರನ್ನು ಮನೆಗೆ ಕಳಿಸಲು ಈಗ ಸೂಕ್ತ ಸಮಯ ಬಂದಿದ್ದು, ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಶಪಥ ಮಾಡಬೇಕು ಎಂದು ಪ್ರಕಾಶ್ ಮನವಿ ಮಾಡಿದರು.
45 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಕೆ.ಬಿ. ಕೋಳಿವಾಡರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಪಕ್ಷದ ಕಛೇರಿ ಕಟ್ಟಡ ಅವರ ಹುಟ್ಟುಹಬ್ಬ ನವೆಂಬರ್ 1 ರಂದು ಉದ್ಘಾಟನೆಯಾಗಬೇಕು ಎಂದು ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಕಾರ್ಯಕರ್ತರ ಸಮಾವೇಶ, ಎಲ್ಲಾ ಪದಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ಕಾಂಗ್ರೆಸ್ ಇತಿಹಾಸ ಪರಿಚಯಿಸುವ ಗ್ರಂಥಾಲಯ, ಹೀಗೆ ಸಕಲ ಸೌಲಭ್ಯಗಳಿರುವ ಕಟ್ಟಡ ಇದಾಗಲಿ. ತಾಲ್ಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಛೇರಿ ಆಗಲಿ ಎಂದು ಮಾತನಾಡಿದವರು ಶುಭ ಕೋರಿದರು.
ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕುಮಾರ ಬತ್ತಿಕೊಪ್ಪ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಪಕ್ಷದ ಮುಖಂಡರುಗಳಾದ ಶೇರು ಕಾಬೂಲಿ, ಆರ್.ಎಂ. ಕುಬೇರಪ್ಪ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಿ.ಎಸ್.ಮರದ ಮತ್ತಿತರರಿದ್ದರು. ಇರ್ಫಾನ್ ದಿಡಗೂರ ಕಾರ್ಯಕ್ರಮ ನಿರೂಪಿಸಿದರು.