ದ್ವಿಚಕ್ರ ವಾಹನಗಳ ಸಮೇತ ಸಂಸದರ ಕಚೇರಿಗೆ ಯುವ ಕಾಂಗ್ರೆಸ್ ಮುತ್ತಿಗೆ
ದಾವಣಗೆರೆ, ಆ.10- ಯಾರಿಗಾದರೂ ಕಷ್ಟ ಇದ್ದರೆ ತಾವೇ ಪೆಟ್ರೋಲ್ ಹಾಕಿಸುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ಉಚಿತವಾಗಿ ಪೆಟ್ರೋಲ್ ಹಾಕಿಸುವಂತೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ದ್ವಿಚಕ್ರ ವಾಹನಗಳೊಂದಿಗೆ ಇಂದು ನಗರದಲ್ಲಿ ವಿನೂತನಾಗಿ ಪ್ರತಿಭಟನೆ ನಡೆಸಿದ್ದಾರೆ.
ಸಂಸದರ ಕಚೇರಿ ಮುಂದೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದುಬಾರಿ ಬೆಲೆಯಿಂದಾಗಿ ಪೆಟ್ರೋಲ್, ಡೀಸೆಲ್ ಹಾಕಿಸಿ ಜೀವನ ನಡೆಸಲು ಸಾಧ್ಯವಾಗದೇ ಕಷ್ಟದಿಂದ ನಿಮ್ಮ ಬಳಿ ಬಂದಿದ್ದೇವೆ. ನೀವೇ ಹೇಳಿದಂತೆ ಪೆಟ್ರೋಲ್, ಡೀಸೆಲ್ ಹಾಕಿಸುವುದರ ಮೂಲಕ ನಿಮ್ಮ ಮಾತು ಉಳಿಸಿಕೊಳ್ಳಿ ಎಂದು ಸಂಸದ ಸಿದ್ದೇಶ್ವರ ಅವರಿಗೆ ಪ್ರತಿಭಟನಾಕಾರರು ಟಾಂಗ್ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕೊರೊನಾ ಸಮಯದಲ್ಲಿ ಜನರ ಜೀವನ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಜೊತೆಗೆ ಅಗತ್ಯ ವಸ್ತುಗಳ ಬೆಲೆಯನ್ನೂ ಏರಿಕೆ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ಷೇಪಿಸಿದರು.
ನಿಖಿಲ್ ಕೊಂಡಜ್ಜಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು, ರೈತರಿಗೆ ಸಂಕಷ್ಟವನ್ನುಂಟು ಮಾಡಿದೆ. ಬೆಲೆ ಏರಿಕೆಯ ಬರೆಯನ್ನು ಇಳಿಸುವ ಪ್ರಯತ್ನದ ಬದಲಿಗೆ ಸಂಸದ ಸಿದ್ದೇಶ್ವರ ಅವರು ಉಢಾಪೆ, ಅಹಂ ಮಾತುಗಳನ್ನಾಡುವುದನ್ನು ಬಿಡಬೇಕು.
ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನರು ನಡೆದುಕೊಂಡು ಓಡಾಡಲಿ ಎಂದು ಹೇಳುವ ಸಿದ್ದೇಶ್ವರ ಅವರ ಮನೆಯವರು ಎಷ್ಟು ಜನರು ನಡೆದಾಡುತ್ತಿದ್ದಾರೆ? ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಸೈಯದ್ ಖಾಲಿದ್ ಅಹಮದ್, ಹರೀಶ್ ಕೆ.ಎಲ್. ಬಸಾಪುರ, ರಂಜಿತ್, ವಿನಯ್ ಜೋಗಪ್ಪನವರ್, ಫಾಹಿಂ, ಓ.ಜಿ. ಕಿರಣ್, ನವೀನ್ ನಲವಾಡಿ, ಪವನ್, ಮಹಬೂಬ್ ಪಾಷಾ, ಮಾರುತಿ, ತಿಪ್ಪೇಶ್, ರಾಜಾ ಸೇರಿದಂತೆ ಇತರರು ಭಾಗವಹಿಸಿದ್ದರು.