ನಾವು ಗಳಿಸಿದ ವಿದ್ಯೆ, ಜ್ಞಾನ, ಹಣ, ಅಧಿಕಾರದ ಲಾಭ ನಮ್ಮ ಕುಟುಂಬಗಳಿಗೆ ಸೀಮಿತವಾಗದೆ, ಸುತ್ತಲಿರುವ ಬಡವ, ದಲಿತರಿಗೂ ಸಲ್ಲಬೇಕು.
– ಬಂಜಗೆರೆ ಜಯಪ್ರಕಾಶ್
ಹರಿಹರ, ಮಾ.28- ಸಂವಿಧಾನಕ್ಕೆ ವಿರು ದ್ಧವಾಗಿ ಆಡಳಿತಗಾರರು ನಡೆದು ಕೊಂಡರೆ ಅದನ್ನು ತಡೆಯಬೇಕಾದವರು ನಿಷ್ಕ್ರಿಯ ರಾಗಿದ್ದಾರೆಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದಲ್ಲಿ ಪರಸ್ಪರ ಬಳಗದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್‍ರವರ ಚಿಂತನೆಗಳ ಮಾಸಿಕ ಉಪನ್ಯಾಸ ಮಾಲಿಕೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನಕ್ಕೆ ಈ ದೇಶದ ಜನರೇ ಕೈ-ಕಾಲು, ಶಾಸಕಾಂಗವೇ ಬಾಯಿ, ಸಂದೇಹ ಪರಿಹರಿಸಲು ನ್ಯಾಯಾಂಗವಿದೆ ಎಂದರು.
ಸಂವಿಧಾನವು ಆಡಳಿತಗಾರರಿಂದ ದುರ್ಬಳಕೆ ಆಗುತ್ತಿದ್ದರೆ ಅದನ್ನು ಸರಿದಾರಿಗೆ ತರಲು ಇರುವ ಸಂಸ್ಥೆಗಳು ಸಕ್ರಿಯವಾಗಬೇಕು. ತಪ್ಪಿದಲ್ಲಿ ದುರಾಡಳಿತ ತಡೆಯುವವರಾರು ಎಂದು ಪ್ರಶ್ನಿಸಿದ ಅವರು, ಚಾಲಕ
ರಾಷ್ ಡ್ರೈವ್ ಮಾಡಿದರೆ ಈ ಮೊಬೈಲ್ ನಂ.ಗೆ ತಿಳಿಸಿ ಎಂದು ವಾಹನಗಳ ಹಿಂದೆ ಬರೆದಿರುವುದನ್ನು ಉದಾಹರಿಸಿದರು.
ಗಾಂಧೀಜಿ, ಅಂಬೇಡ್ಕರ್ ಈ ದೇಶದ ಎರಡು ಮಹಾನ್ ಸಂತರು, ದಾರ್ಶನಿಕರು, ರಾಜಕಾರಣಿಗಳಾಗಿದ್ದಾರೆ. ಧರ್ಮಕ್ಕೆ ಅಂಟಿಕೊಂಡೇ ಗಾಂಧೀಜಿ ಹೇಳಿದ ಕೋಮು ಸಾಮರಸ್ಯ, ಸಹಜೀವನದ ಪಾಠ ನಮಗೆ ಆದರ್ಶವಾಗಬೇಕೆಂದರು.
ಪುರೋಹಿತಶಾಹಿ ಆಡಳಿತ ವಿರೋಧಿಸಿದ್ದ ಅಂಬೇಡ್ಕರ್, ಮೇಲ್ಜಾತಿಯವರಿಗೆ ಆಡಳಿತದ ಚುಕ್ಕಾಣಿ ನೀಡಿದರೆ ನಮಗೆ ಬ್ರಿಟೀಷರ ಆಡಳಿತವೇ ಉತ್ತಮ ಎಂದಿದ್ದರು. ಈ ಹಿಂದೆ ದಮನಿಸಿದವರನ್ನು ದ್ವೇಷಿಸಬೇಡಿ, ಈಗಲೂ ದಮನಿಸುವವರ ವಿರುದ್ಧ ಹೋರಾಡಿ
ಎಂದಿದ್ದ ಅಂಬೇಡ್ಕರ್, ಸಮಾಜದಲ್ಲಿ ಹಿಂಸಾಚಾರ ಸೃಷ್ಟಿಸುವ ಇಚ್ಚೆ ಇರಲಿಲ್ಲ, ಸಮಾಜ ಸುಧಾರಣೆ ಬಗ್ಗೆ ವಿವೇಕಯುಕ್ತ ಭಾವನೆ ಹೊಂದಿದ್ದಾ ರೆಂದರು.
ಅಂಬೇಡ್ಕರ್‍ರವರ ಭಾವಚಿತ್ರ ಪ್ರಚಾರ ಪಡೆದಂತೆ ಅವರ ತತ್ವ, ಸಿದ್ಧಾಂತಗಳು ಪ್ರಚಾರ ಪಡೆದಿಲ್ಲ. ಅವರನ್ನು ಅಭ್ಯಾಸ ಮಾಡುವ ಜನ ಸೀಮಿತವಾಗಿದ್ದಾರೆ. ಯುಕೆ, ಯುಎಸ್‍ಎನಲ್ಲಿ ಉಳಿದಿದ್ದರೆ ಅವರಿಗೆ ಅಲ್ಲಿನ ಸರ್ಕಾರ ಅಧಿಕಾರ, ಅಂತಸ್ತು ನೀಡುತ್ತಿತ್ತು.
ಆದರೆ ಅಪಮಾನ ಎದುರಿಸಿಯೂ ಭಾರತದಲ್ಲಿದ್ದು ದಲಿತರ ಪರ ಧ್ವನಿ ಎತ್ತಿದರು ಎಂದರು.
ಭಾರತೀಯ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಕೊಡಿಸುವ ಅವರ ಪ್ರಸ್ತಾವನೆಗೆ ಸಂಸತ್ತಿನಲ್ಲಿ ಸೋಲುಂಟಾದಾಗ ನೊಂದ ಅಂಬೇಡ್ಕರ್ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರು ಕೇವಲ ದಲಿತ ಮಹಿಳೆಯರಿಗಲ್ಲ ದೇಶದ ಎಲ್ಲಾ ಜಾತಿ, ಜನಾಂಗದ ಮಹಿಳೆಯರ ಪರ ನಿಲುವು ಹೊಂದಿದ್ದರು ಎಂದರು.
ನಿವೃತ್ತ ಪ್ರಾಚಾರ್ಯ, ಗಾಂಧೀಜಿ ಉಪನ್ಯಾಸ ಮಾಲಿಕೆ ಖ್ಯಾತಿಯ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಮಾತ ನಾಡಿ, ಮತಾಂತರಗೊಂಡಿದ್ದ ಅಂಬೇಡ್ಕರ್ ಬೌದ್ಧ ಧರ್ಮದಲ್ಲೂ ಹೀನಯಾನ, ಮಹಾಯಾನ ಎಂಬ ಮೇಲು, ಕೀಳು ವ್ಯವಸ್ಥೆಯಿಂದ ಬೇಸತ್ತು ನವಯಾನ ಆರಂಭಿಸಿದ್ದರು.
ಅಂಬೇಡ್ಕರ್‍ರನ್ನು ಅಭ್ಯಾಸ ಮಾಡಿದರೆ ಭಾರತವನ್ನು ಅರ್ಥ ಮಾಡಿಕೊಂಡಂತೆ. ಖಾದಿ ಮತ್ತು ಕಾವಿಯವರ ಅನೈತಿಕ ಸಂಬಂಧ ದೇಶಕ್ಕೆ ತೊಡಕಾಗಿದೆ. ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬಾರದೆಂದರು.
ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ. ಸಿ.ವಿ.ಪಾಟೀಲ್ ಮಾತನಾಡಿ ಪದಾಧಿಕಾರಿ, ಬ್ಯಾಂಕ್ ಖಾತೆ ಇಲ್ಲದ ಅನೌಪಚಾರಿಕ ಸಂಸ್ಥೆಯಾದ ಪರಸ್ಪರ ಬಳಗದಿಂದ ಈ ಹಿಂದೆ ಎರಡು ವರ್ಷ ಗಾಂಧೀಜಿಯವರ ಕುರಿತು ಮಾಸಿಕ ಉಪನ್ಯಾಸ ಮಾಲಿಕೆ ಯಶಸ್ವಿಯಾಗಿ ನಡೆಸಲಾಗಿದೆ. ಅದೇ ಮಾದರಿಯಲ್ಲಿ ಅಂಬೇಡ್ಕರ್ ಕುರಿತು ಉಪನ್ಯಾಸ ಮಾಲಿಕೆ ನಡೆಯಲಿದೆ. ತಾಲ್ಲೂಕಿನ ಆಸಕ್ತರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಲೇಖಕ ಜೆ.ಕಲೀಂಬಾಷಾ, ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್, ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಚ್.ಪ್ಯಾಟಿ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಹುಲಿಕಟ್ಟಿ ಚನ್ನಬಸಪ್ಪ, ಎ.ರಿಯಾಜ್ ಅಹ್ಮದ್, ಪಿ.ಜೆ.ಮಹಾಂತೇಶ್, ಎಚ್.ನಿಜಗುಣ, ಪ್ರೊ. ಹದಡಿ ಯಲ್ಲಪ್ಪ, ಡಾ.ಎ.ಬಿ.ರಾಮ ಚಂದ್ರಪ್ಪ, ಬಿ.ಬಿ.ರೇವಣನಾಯ್ಕ್, ಡಿ.ಎಂ.ಮಂಜುನಾಥಯ್ಯ ಇತರರಿದ್ದರು.