ದಾವಣಗೆರೆ, ಆ.10- ನಗರದ ಎಸ್ಸೆಸ್ ಹೈಟೆಕ್ ಬಡಾವಣೆಯ ಪೆಟ್ರೋಲ್ ಬಂಕ್ ಪಕ್ಕ ಮತ್ತು ಹಿಂಭಾಗದಲ್ಲಿ ಲಿಂಕ್ ರಸ್ತೆ ಇಲ್ಲದ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ಎಸ್.ಎ. ರವೀಂದ್ರನಾಥ್ ಅವರು ನಗರ ಪಾಲಿಕೆ ಹಾಗೂ ದೂಡಾ ಅಧಿಕಾರಿಗಳ ಸಹಿತ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಇನ್ನು 15 ದಿನಗಳೊಳಗಾಗಿ ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಅವರಿಗೆ ಸೂಚನೆಯೊಂದಿಗೆ ಗಡುವು ನೀಡಿದ್ದಾರೆ.
ಲೇಔಟ್‍ಗೆ ಅನುಮತಿ ನೀಡುವಾಗ ಲಿಂಕ್ ರಸ್ತೆ ಇಲ್ಲದೇ ಹೇಗೆ ಕೊಟ್ಟಿದ್ದೀರಿ. ಹಿಂದೆ ತಪ್ಪು ಆಗಿದೆಯೆಂದು ಅದನ್ನೇ ಮುಂದುವರೆಸುವುದು ಬೇಡ. ಮುಂದೆ ಇಂತಹ ಲೋಪಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಿ ಎಂದು ದೂಡಾ ಆಯುಕ್ತರಿಗೆ ತಾಕೀತು ಮಾಡಿದರು.
ಅಲ್ಲಿಂದ ಅಂಬಿಕಾ ಬಡಾವಣೆಯಲ್ಲಿ ತಮ್ಮ ಶಾಸಕರ ವಿಶೇಷಾನುದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯನ್ನು ಶಾಸಕರು ವೀಕ್ಷಿಸಿದರು. ಅಂಬಿಕಾ ನಗರದಲ್ಲಿ ಖಾಲಿ ಬಿಟ್ಟಿರುವ ಜಾಗವು ಯಾವುದೇ ಕಾರಣಕ್ಕೂ ಪರಭಾರೆ ಆಗುವುದು, ದುರ್ಬಳಕೆ ಆಗದಂತೆ ಗಮನ ಹರಿಸಿ. ಸಿಎ ನಿವೇಶನಗಳನ್ನು ಪಾಲಿಕೆ ಸುಪರ್ದಿಗೆ ಪಡೆದು, ತಕ್ಷಣವೇ ಫೆನ್ಸಿಂಗ್ ಹಾಕಿ, ಬಂದೋಬಸ್ತ್ ಮಾಡಿ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅವರಿಗೆ ಆದೇಶಿಸಿದರು.
ಸರ್ವೇ ನಂಬರ್ 241, 242, 243 ಹಾಗೂ 244ರಲ್ಲಿ ರೈಲ್ವೇ ಟ್ರ್ಯಾಕ್ ಇರುವ ಭಾಗದಲ್ಲಿ 100-450 ಅಡಿಯಷ್ಟು ದೂಡಾ ಅನುಮೋದಿತ ಬಡಾವಣೆಯ ಬಯಲು ಜಾಗದಲ್ಲಿ ಅಕ್ರಮವಾಗಿ ಡೋರ್ ನಂಬರ್ ನೀಡಿ, ಮಾರಾಟ ಮಾಡುವ ಪ್ರಯತ್ನಗಳು ನಡೆದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಹೇಳುತ್ತಿದ್ದು, ತಕ್ಷಣವೇ ಇದನ್ನು ರದ್ಧುಪಡಿಸಿ, ಖಾಲಿ ಜಾಗಕ್ಕೆ ಮೊದಲು ಬೇಲಿ ಹಾಕಿಸಿ ಎಂದು ಸೂಚಿಸಿದರು.
ನಂತರ ರಾಜೇಂದ್ರ ಬಡಾವಣೆ ಮೂಲಕ ಡಿಸಿಎಂ ಟೌನ್ ಶಿಪ್‍ಗೆ ಹೋಗುವ ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ನಿವೇಶನದ ಮಾಲೀಕರ ಜೊತೆಗೆ ಚರ್ಚಿಸಿ, ಆ ಜಾಗವನ್ನು ರಸ್ತೆಗೆ ಬಳಸಿಕೊಳ್ಳಿ ಎಂದು ಸೂಚಿಸಿದರು.
ಭಗೀರಥ ವೃತ್ತದಿಂದ ಎಸ್‍ಸಿ-ಎಸ್‍ಟಿ ಹಾಸ್ಟೆಲ್‍ವರೆಗಿನ 60 ಅಡಿ ರಸ್ತೆಗೆ ತಮ್ಮ ಶಾಸಕರ ವಿಶೇಷಾನುದಾನದಲ್ಲಿ ನೀಡಿರುವ 1 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲು ಪಾಲಿಕೆ ಆಯುಕ್ತರಿಗೆ ರವೀಂದ್ರನಾಥ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾ ಪ್ರಕಾಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಕೀಲ ಎ.ವೈ.ಪ್ರಕಾಶ್, ಪೆಟ್ರೋಲ್ ಬಂಕ್ ಮಾಲೀಕ ಹೆಚ್.ಬಿ. ದುರುಗೇಶ್, ಎಂ.ಎನ್. ಮಂಜುನಾಥ್, ಗುತ್ತಿಗೆದಾರ ಮಲ್ಲಿಕಾರ್ಜುನ್, ಸ್ಥಳೀಯ ನಿವಾಸಿಗಳಾದ ಹೆಚ್.ವಿ. ಶಿವರುದ್ರಪ್ಪ, ಹಾಲೋಳ್ ಭೀಮಪ್ಪ, ದೂಡಾ ಜೆಡಿ ರೇಣುಕಾ ಪ್ರಸಾದ್, ಪಾಲಿಕೆ ಕಂದಾಯ ವಿಭಾಗದ ವ್ಯವಸ್ಥಾಪಕ ವೆಂಕಟೇಶ್, ಪಾಲಾನಾಯ್ಕ ಸೇರಿದಂತೆ ಇತರರು ಇದ್ದರು.