ದಾವಣಗೆರೆ, ಮಾ. 28- ಬರುವ ಸೆ.15ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 15ರಂದು 25ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಮಟ್ಟದ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ನಗರದಲ್ಲಿರುವ ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ನಿವಾಸದಲ್ಲಿ ಭಾನುವಾರ ಮುಂಜಾನೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಸಮುದಾಯಕ್ಕೆ 6 ತಿಂಗಳೊಳಗೆ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಭರವಸೆ ನೀಡಿದ್ದಾರೆ. ಸೆಪ್ಟೆಂಬರ್ 15ರೊಳಗೆ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಕೇವಲ ನಾಲ್ಕು ಗೋಡೆಯ ಮಧ್ಯೆ ನಮಗೆ ಮಾತು ಕೊಟ್ಟಿಲ್ಲ. ಬದಲಾಗಿ ಅಧಿವೇಶನದಲ್ಲಿ ಮಾತು ಕೊಟ್ಟಿದ್ದಾರೆ. ಅದು ದಾಖಲೆಯಾಗಿ ದಾಖಲಾಗಿರುತ್ತದೆ. ಆದ್ದ ರಿಂದ ಅವರ ಮೇಲೆ ಭರವಸೆ ಇಟ್ಟು ಹೋರಾಟಕ್ಕೆ ಅಲ್ಪ ವಿರಾಮ ನೀಡಲಾಗಿದೆಯೇ ಹೊರತು, ಹೋರಾಟ ಕೈ ಬಿಟ್ಟಿಲ್ಲ ಎಂದು ಹೇಳಿದರು.
ಭಕ್ತರು ಸಮಾಜದ ಬೆನ್ನೆಲುಬು, ನಮ್ಮ ಮತ್ತು ಭಕ್ತರ ಸಂಬಂಧ ತಾಯಿ – ಮಗನ ಸಂಬಂಧ, ಇದು ತಾತ್ಕಾಲಿಕ ವಿರಾಮ ಅಷ್ಟೇ. ಮೀಸಲಾತಿ ಆದೇಶ ಬರುವವರೆಗೂ ಭಕ್ತರೂ ಮೈಮರೆಯಬಾರದು ಎಂದು ಎಚ್ಚರಿಸಿದರು.
ಲಿಂಗಾಯತ ಪಂಚಮಸಾಲಿ ಎಂದು ಬರೆಯಿಸಿ: ಸಮಾಜ ಬಾಂಧವರು ಜನಗಣತಿ ಹಾಗೂ ಶಾಲಾ ದಾಖಲಾತಿಗಳಲ್ಲಿ ‘ಲಿಂಗಾಯತ ಪಂಚಮಸಾಲಿ’ ಎಂದು ಬರೆಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಈ ರೀತಿ ಬರೆಸದೇ ಇದ್ದರೆ 2ಎ ಮೀಸಲಾತಿ ಸಿಗುವುದು ಕಷ್ಟ. ಆದ್ದರಿಂದ ಸಮಾಜದ ಮುಖಂ ಡರು ಈಗಿನಿಂದ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
23 ದಿನಗಳ ಧರಣಿ ಸತ್ಯಾಗ್ರಹದ ನಂತರ ಹೋರಾಟದಲ್ಲಿ ಭಾಗವಹಿಸಿದ ಸ್ವಾಭಿಮಾನಿ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಲು ‘ಶರಣು ಶರಣಾರ್ಥಿ ಸಂದೇಶ’ ಜಾಥಾ ಎಲ್ಲಾ ಕಡೆಯಲ್ಲೂ ಸಂಚರಿಸಿ ಜಾಗೃತಿ ಮೂಡಿಸಲಿದೆ.
ಜಾಥಾ ಜೆ.ಎಚ್.ಪಟೇಲ್ ಸಮಾಧಿ ಸ್ಥಳ ತಲುಪಿ ಅಲ್ಲಿಂದ ಉಡುತಡಿ ತಲುಪಿ ಅಕ್ಕ ಮಹಾದೇವಿ ಪ್ರತಿಮೆಗೆ ನಮಿಸಿ, ಹಿರೇಕೆರೂರಿನಲ್ಲಿ ವಾಸ್ತವ್ಯ ಹೂಡಲಾಗುವುದು ಎಂದರು.
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಕಾಲಿನಲ್ಲಿ ಬೊಬ್ಬೆ ಬಂದರೂ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಧರಣಿಯಲ್ಲಿ ಪಾಲ್ಗೊಳ್ಳುವಂತೆ ವಿಜಯಾನಂದ ಕಾಶಪ್ಪನವರ ಮನವಿ ಮಾಡಿದ್ದರು. ಆದರೆ ಅವರು ತುರ್ತು ಕೆಲಸಗಳು ಇರುವುದಾಗಿ ಧರಣಿಯಿಂದ ಹಿಂದೆ ಸರಿದರು ಎಂದು ಪ್ರಶ್ನೆಯೊಂದಕ್ಕೆ ಶ್ರೀಗಳು ಉತ್ತರಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಚಿವ ಮುರುಗೇಶ ನಿರಾಣಿ ಅವರು ‘ಎಲ್ಲಿ ಹೋಗಿದೆ ಮಾಡು ಇಲ್ಲವೇ ಮಡಿ ಹೋರಾಟ’ ಎಂದು ನಮ್ಮ ಹೋರಾಟದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ನಾವು ಮುಖ್ಯಮಂತ್ರಿಗಳ ಭರವಸೆ ಮೇಲೆ ಹೋರಾಟಕ್ಕೆ ವಿರಾಮ ನೀಡಿದ್ದೇವೆ ಎಂದರು.
ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮತ್ತೆ ಮೀಸಲಾತಿ ಕಲ್ಪಿಸುವಲ್ಲಿ ವಿಳಂಬವಾದರೆ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸುತ್ತೇವೆ ಎಂದು ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಮಲ್ಲಿಕಾರ್ಜುನ ಅಕ್ಕಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.