ಭೋವಿ ಸಮುದಾಯಕ್ಕೆ ಸಚಿವ ಸ್ಥಾನ ನೀಡದ್ದಕ್ಕೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಅಸಮಾಧಾನ
ದಾವಣಗೆರೆ, ಆ.9- ಭೋವಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ಸಿಗದಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭೋವಿ ಗುರು ಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನಗೊಂಡಿದ್ದಾರೆ.
ನಗರದ ವಿರಕ್ತಮಠದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಿಜೆಪಿ ಸರ್ಕಾರದ ಸಚಿವ ಸಂಪುಟವು ಅನುಭವ ಮಂಟಪದ ರೀತಿ ಇರಬೇಕಿತ್ತು. ಎಲ್ಲ ಜಾತಿ, ಜನಾಂಗದವರಿಗೂ ಪ್ರಾತಿನಿಧ್ಯ ದೊರೆಯಬೇಕಿತ್ತು. ದೊಡ್ಡ ಸಮುದಾಯ ಗಳನ್ನು ಓಲೈಕೆ ಮಾಡುವ ಮೂಲಕ ಸಣ್ಣ ಸಮುದಾಯಗಳನ್ನು ಜೀವಂತ ಶವ ಮಾಡಿ ದ್ದಾರೆ. ಅದು ಆಗಬಾರದು ಎಂದು ತಿಳಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ಕೂಡ ಸಮ್ಮಿಶ್ರ ಸರ್ಕಾರ ಇದ್ದಂತೆ. ಸಂಪುಟದಲ್ಲಿ ಸಾಮಾಜಿಕ ನಾಯವೆಲ್ಲಿದೆ. ಈ ಸರ್ಕಾರ ಸಮಾಜಕ್ಕೆ ಸಾಮಾ ಜಿಕ ನ್ಯಾಯ ಕೊಡಿಸೋಕೆ ಹೇಗೆ ಸಾಧ್ಯ. ಸಂಪುಟ ರಚನೆ ದೊಡ್ಡ ಸಮುದಾಯಗಳ ಓಲೈಕೆ ಕೆಲಸವಾಗಬಾರದು. ಇದು ಶಾಸಕರನ್ನು ಪಕ್ಷಾಂತರ ಮಾಡಿಕೊಂಡು ರಚನೆ ಮಾಡಿರುವ ಸರ್ಕಾರ. ಹೀಗಾಗಿ, ಬಿಜೆಪಿ ಮತ್ತು ಪಕ್ಷಾಂತರಿ ಶಾಸಕರು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಷ್ಟ್ರೀಯ ಪಕ್ಷವಾಗಿದ್ದರಿಂದ ಮುಖ್ಯಮಂತ್ರಿಗಳ ವಿವೇಚನೆಯಿಂದಷ್ಟೆ ಏನು ನಡೆಯುವುದಿಲ್ಲ. ಮುಖ್ಯಮಂತ್ರಿ ಮತ್ತು ನಿಕಟ ಪೂರ್ವ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದಡಿಯಲ್ಲಿ ಯೋಜನೆ ರೂಪಿಸಬೇಕು. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕು ಎಂದು ಶ್ರೀಗಳು ಆಗ್ರಹಿಸಿದರು.