ಪಾಲಿಕೆಯಿಂದ ವೃಕ್ಷೋದ್ಯಾನ ವನ

ದಾವಣಗೆರೆ, ಆ.8- `ಜಪಾನೀಸ್ ಮಿಯಾ ವಾಕಿ’ ಪದ್ಧತಿಯಂತೆ ವೃಕ್ಷೋದ್ಯಾನ ವನ ನಿರ್ಮಿಸಲು ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಆಯುಕ್ತ  ವಿಶ್ವನಾಥ್ ಮುದ್ದಜ್ಜಿ ಮಾರ್ಗದರ್ಶನದಲ್ಲಿ ವಿವಿಧ ದೇಸಿ ತಳಿಯ 800 ಸಸಿಗಳನ್ನು ನೆಟ್ಟು ಪಾಲಿಕೆಯ ನೌಕರರು ಶ್ರಮದಾನ ಮಾಡಿದರು.

ಶಾಮನೂರು ಗ್ರಾಮದ ಡಾಲರ್ಸ್ ಕಾಲೋನಿ ಬಳಿಯ ಉದ್ಯಾನವನದಲ್ಲಿ ಇಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಸಾಕ್ಷಿಯಾದರು. 

ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಹಸಿರೇ ನಮ್ಮ ಉಸಿರು‌. ಪರಿಸರವಿದ್ದರೆ ಮನುಕುಲದ ಉಳಿವು. ಪರಿಸರದ ಮಡಿಲು ತಾಯಿಯ ಮಡಿಲಿನಂತೆ.‌ ಇದನ್ನು ಮನಗಾಣಬೇಕು. ದೈವದತ್ತವಾದ ಹಸಿರನ್ನು ಸಂರಕ್ಷಿಸುವುದು ನಮ್ಮ ಹೊಣೆಯಾಗಬೇಕು. ಆಗ ನಮ್ಮ ಬದುಕು ಹಸನಾಗಲಿದೆ ಎಂದು ತಿಳಿಸಿದರು.

ಹಸಿರಿನ ಮಹತ್ವದ ಅರಿವು ಕೊರೊನಾ ಸಂದರ್ಭದಲ್ಲಿ ಸಾಬೀತಾಗಿದೆ. ಕೊರೊನಾ ಪೀಡಿತರು ಆಮ್ಲಜನಕ ಇಲ್ಲದಿದ್ದರೆ ಜೀವವೇ ಉಳಿಯುವುದು ಕಷ್ಟಸಾಧ್ಯ. ಆಮ್ಲಜನಕಕ್ಕಾಗಿ ಪರಿತಪಿಸುವ ಸ್ಥಿತಿಯೂ ಒದಗಿ ಬಂದಿತ್ತು. ಕೃತಕ ಆಮ್ಲಜನಕದ ಜೊತೆಗೆ ಯಂತ್ರದ ಮುಖೇನ ಪರಿಸರ ಮಡಿಲಿನಲ್ಲಿನ ಆಮ್ಲಜನಕ ಹಿಟಿದಿಟ್ಟು ಬಳಕೆಯನ್ನೂ ಮಾಡುವ ಪರಿಸ್ಥಿತಿ ಬಂದಿತ್ತು ಎಂದು ಮುನ್ನೆಚ್ಚರಿಸಿದರು.

ಹಾಗಾಗಿ ಇದರ ಅರಿವು ಇಟ್ಟುಕೊಂಡು ನಮ್ಮ ಜೀವ ಉಳಿವಿಕೆಗೆ ಪರಿಸರ ಸಂರಕ್ಷಣೆಗೆ ಹೆಜ್ಜೆ ಇಡಬೇಕು. ‌ಪರಿಶುದ್ಧ ವಾತಾವರಣಕ್ಕೆ ಸ್ವಚ್ಛತೆ ಕಾಯ್ದುಕೊಂಡು ನೈಸರ್ಗಿಕ ಬದುಕಿಗೆ ಮುನ್ನುಡಿ ಇಟ್ಟು ಕಲುಷಿತ ವಾತಾವರಣ ದೂರವಾಗಿಸಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಆಯುಕ್ತ ವಿಶ್ವನಾಥ ಪಿ. ಮುದ್ದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಪಾಲಿಕೆ ಸದಸ್ಯರಾದ ಕಲ್ಲಹಳ್ಳಿ ನಾಗರಾಜ್, ಯಶೋಧ ಯಗ್ಗಪ್ಪ ಸೇರಿದಂತೆ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು, ನೌಕರರ ಸಂಘದ ಪದಾಧಿಕಾರಿಗಳು ಶ್ರಮದಾನ ಮಾಡಿದರು.

error: Content is protected !!