ಗಾಂಜಾ ವಶ : ಬಂಧನ

ದಾವಣಗೆರೆ, ಮಾ.26- ಪ್ರತ್ಯೇಕ ಎರಡು ಪ್ರಕರಣ ಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಗರದಲ್ಲಿ ಒಟ್ಟು 390 ಗ್ರಾಂ ಒಣ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪಾ ಧೀಕ್ಷಕ ಕೆ.ಎಲ್. ನಾಗರಾಜ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕಿ ಜಿ.ಬಿ. ವಿದ್ಯಾ ರಾಷ್ಟ್ರೀಯ ಹೆದ್ದಾರಿ-4 ರಸ್ತೆಯ ಪಕ್ಕದಲ್ಲಿರುವ ಹಳೇ ಕುಂದುವಾಡ ಗ್ರಾಮದಿಂದ ದಾವಣಗೆರೆ ಕಡೆ ಹೋಗುವ ಸರ್ವೀಸ್ ರಸ್ತೆಯ ಹತ್ತಿರ ದಾಳಿ ನಡೆಸಿ, ಬಾಷಾ ನಗರದ ಹೊನ್ನೂರ್ ಅಲಿ ಎಂಬಾತನನ್ನು ಬಂಧಿಸಿದ್ದು, ಈತ ಅಕ್ರಮವಾಗಿ 280 ಗ್ರಾಂ ಒಣ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ್ದಾರೆ.

ಅಂತೆಯೇ ಅಬಕಾರಿ ನಿರೀಕ್ಷಕ ವಿನೋದ್ ಕಳಸಪ್ಪ ಗೋಳ್ ಮತ್ತು ಸಿಬ್ಬಂದಿಗಳ ತಂಡವು ನಗರದ ಹದಡಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ-4ರ ಬ್ರಿಡ್ಜ್ ಕೆಳಭಾಗದಲ್ಲಿ ಹದಡಿ ಕಡೆಯಿಂದ ನಗರದ ಕಡೆಗೆ ಬರುವ ರಸ್ತೆಯಲ್ಲಿ ದಾಳಿ ನಡೆಸಿ, ಹಿರಿಯೂರು ತಾಲ್ಲೂಕಿನ ಕೆ.ಎಂ. ಕೊಟ್ಟಿಗೆ ಗ್ರಾಮದ ಫಸಲ್ ಎಂಬಾತನನ್ನು ಬಂಧಿಸಿದ್ದು, ಈತ ದ್ವಿಚಕ್ರ ವಾಹನದಲ್ಲಿ ಮಾರಾಟದ ಉದ್ದೇಶಕ್ಕಾಗಿ 110 ಗ್ರಾಂ ಒಣಗಿದ ಕಡ್ಡಿ ಹಾಗೂ ಬೀಜ ಮಿಶ್ರಿತ ಗಾಂಜಾ ಸೊಪ್ಪನ್ನು ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಎರಡೂ ಪ್ರಕರಣಗಳಿಂದ ಒಟ್ಟು 390 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅಂದಾಜು 7,750  ರೂ. ಮೌಲ್ಯದ ಗಾಂಜಾ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡು ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಜಿಲ್ಲೆಯ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಬಿ. ಶಿವಪ್ರಸಾದ್ ತಿಳಿಸಿದ್ದಾರೆ.

error: Content is protected !!