ಸಂಸತ್ ಕಲಾಪಕ್ಕೆ ಅಡ್ಡಿ ಸಂವಿಧಾನಕ್ಕೆ ಅಪಚಾರ

ಜಿಲ್ಲೆಗೆ ಸಚಿವ ಸ್ಥಾನ ನೀಡಲು ಬೊಮ್ಮಾಯಿ ಬಳಿ ಮನವಿ: ಸಂಸದ ಸಿದ್ದೇಶ್ವರ

ದಾವಣಗೆರೆ, ಆ. 8 – ಸಂಸತ್ತಿನಲ್ಲಿ ಕೊರೊನಾ, ಭಯೋತ್ಪಾದನೆ, ಗಡಿ ಸಮಸ್ಯೆ ಮುಂತಾದ ಗಂಭೀರ ವಿಷಯಗಳ ಚರ್ಚೆಗೆ ಅವಕಾಶ ಕೊಡದೇ ಗದ್ದಲ ನಡೆಸುತ್ತಿರುವ ಪ್ರತಿಪಕ್ಷಗಳು ಸಂವಿಧಾನಕ್ಕೆ ಅಪಪ್ರಚಾರ ಮಾಡುತ್ತಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೃಷಿ ಮಸೂದೆಗಳು ಹಾಗೂ ಪೆಗಾಸಸ್ ಕಣ್ಗಾವಲು ಆರೋಪ ಸೇರಿದಂತೆ ಎಲ್ಲ ವಿಷಯಗಳ ಪ್ರಶ್ನೆಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಆದರೂ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸದನದ ಕಲಾಪ ನಡೆಸಲು ಅಡ್ಡಿಪಡಿಸುತ್ತಿವೆ ಎಂದವರು ಹೇಳಿದ್ದಾರೆ.

ಜುಲೈ 19ರಿಂದ ಸಂಸತ್ತಿನ ಅಧಿವೇಶನ ಆರಂಭವಾಗಿದೆಯಾದರೂ, 10-12 ಗಂಟೆ ಕಾಲ ಮಾತ್ರ ಕಲಾಪ ನಡೆಸಲು ಸಾಧ್ಯವಾಗಿದೆ. ಪ್ರತಿಪಕ್ಷಗಳ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್, ವೈ.ಎಸ್.ಆರ್. ಕಾಂಗ್ರೆಸ್, ಟಿ.ಆರ್.ಎಸ್., ಅಕಾಲಿ ದಳ ಮುಂತಾದ ಪಕ್ಷಗಳು ಪ್ರತಿಭಟನೆ ನಡೆಸದೇ ಬರುವ ಇನ್ನೊಂದು ವಾರವಾದರೂ ಸದನದ ಕಲಾಪ ನಡೆಸಲು ಅವಕಾಶ ಕೊಡಬೇಕು ಎಂದವರು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಪ್ರತಿಪಕ್ಷದ ಸ್ಥಾನವೂ ದೊರೆತಿಲ್ಲ. ಅದರ ರಾಷ್ಟ್ರೀಯ ಅಧ್ಯಕ್ಷರ  ನೇಮಕ ಇನ್ನೂ ಮಾಡಲು ಸಾಧ್ಯವಾಗಿಲ್ಲ. ಇಷ್ಟಾದರೂ ಕಾಂಗ್ರೆಸ್ ತನ್ನ ವರ್ತನೆ ಸರಿಪಡಿಸಿಕೊಳ್ಳುತ್ತಿಲ್ಲ ಎಂದ ಸಿದ್ದೇಶ್ವರ, ರಾಜ್ಯದಲ್ಲಿ ಚುನಾವಣೆಗೆ ಮುಂಚೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸಂಘರ್ಷ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಕ್ಸಿಜನ್ ಘಟಕಗಳ ಸ್ಥಾಪಿಸುವ ಜೊತೆಗೆ, ಮಕ್ಕಳಿಗಾಗಿ ವಿಶೇಷ ವೆಂಟಿಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ಬರುವ ಡಿಸೆಂಬರ್ ಒಳಗೆ ಜಿಲ್ಲೆಯ ಎಲ್ಲರೂ ಎರಡು ಡೋಸ್ ಲಸಿಕೆ ಪಡೆಯಲಿದ್ದಾರೆ ಎಂದು ಹೇಳಿದರು.

ಟ್ರ್ಯಾಕ್ಟರ್ ಎಂ.ಆರ್.ಪಿ. ಬೆಲೆಯನ್ನು ಇದುವರೆಗೂ ಪ್ರಕಟಿಸದೇ ರೈತರಿಗೆ ಸಬ್ಸಿಡಿಯಲ್ಲಿ ತೊಂದರೆಯಾಗಿತ್ತು. ಈಗ ಎಂ.ಆರ್.ಪಿ. ನಿಗದಿಗೆ ಆದೇಶ ಹೊರಡಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಎಂ.ಆರ್.ಪಿ.ಗಿಂತ ಹೆಚ್ಚು ಹಣ ಕೊಡಬಾರದು ಎಂದವರು ಮನವಿ ಮಾಡಿಕೊಂಡರು.

ಜಿಲ್ಲೆಯಲ್ಲಿ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಕೇಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದೇಶ್ವರ, ಈ ಬೇಡಿಕೆ ಈಡೇರುವ ನಿರೀಕ್ಷೆ ಇದೆ ಎಂದರು.

75 ವರ್ಷಕ್ಕೂ ಮೀರಿದ ಹಿರಿಯರಿಗೆ ಮುಂದಿನ ಬಾರಿ ಸಂಸದ ಸ್ಥಾನಕ್ಕೆ ಟಿಕೆಟ್ ನೀಡುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೇ ಬಾರಿ ಎಲ್ಲೆಡೆ ನಿಯಮ ಜಾರಿಗೆ ತರಲು ಆಗುವುದಿಲ್ಲ. ಪಕ್ಷದಲ್ಲಿ ನಿಧಾನವಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡುವಂತೆ ಹೇಳಿದ ಸಿದ್ದೇಶ್ವರ, ಹೈಕೋರ್ಟ್ ಆದೇಶದ ಪ್ರಕಾರ ಬದುಕಿರುವ ವ್ಯಕ್ತಿಗಳ ಹೆಸರುಗಳನ್ನು ಸರ್ಕಾರಿ ತಾಣಗಳಿಗೆ ಇಡುವಂತಿಲ್ಲ. ಆದರೆ, ಜಿಲ್ಲೆಯಲ್ಲಿ ಈಗಾಗಲೇ ರಾಜಕೀಯ ಮುಖಂಡರ ಹೆಸರುಗಳನ್ನು ಇಟ್ಟಿದ್ದು, ಬದಲಿಸುವ ವಿವಾದಕ್ಕೆ ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಮುಖಂಡರಾದ ಜಗದೀಶ್, ಕೊಂಡಜ್ಜಿ ಜಯಪ್ರಕಾಶ್, ದೇವರಮನೆ ಶಿವಕುಮಾರ್, ಡಿ.ಎಸ್. ಶಿವಶಂಕರ್,  ಶ್ರೀನಿವಾಸ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!