ದಾವಣಗೆರೆ, ಅ. 7 – ಕೊರೊನಾ ಸೋಂಕಿನ ಹತ್ತು ದಿನಗಳ ನಂತರ ಅಂಗಾಂಗ ವೈಫಲ್ಯ ಉಂಟಾಗಿ ಸಾವು ಸಂಭವಿಸಿದರೂ ಅದನ್ನು ಕೊರೊನಾದಿಂದ ಸಂಭವಿಸಿದ ಸಾವು ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಸಚಿವ ಭೈರತಿ ಬಸವರಾಜ್ ಸೂಚಿಸಿದ್ದಾರೆ.
ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕೊರೊನಾದಿಂದ ಸಾವು ಸಂಭವಿಸಿದ ಪ್ರತಿ ಕುಟುಂಬಕ್ಕೂ ಪರಿಹಾರ ತಲುಪಬೇಕು. ಹೀಗಾಗಿ ಸಾವುಗಳನ್ನು ದಾಖಲಿಸಬೇಕು ಎಂದು ಹೇಳಿದರು.
ಈ ಬಗ್ಗೆ ಪ್ರಸ್ತಾಪಿಸಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಸೋಂಕು ಬಂದ ಹತ್ತು ದಿನಗಳಲ್ಲಿ ಸಾವು ಸಂಭವಿಸಿದರೆ ಕೊರೊನಾ ಸಾವು ಎಂದು ಪರಿಗಣಿಸಲಾಗುತ್ತಿದೆ. ನಂತರ ಅಂಗಾಂಗ ವೈಫಲ್ಯ ಉಂಟಾದರೆ ಕೊರೊನಾ ಸಾವು ಎಂದು ನಮೂದಿಸುತ್ತಿಲ್ಲ ಎಂದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರಿನಲ್ಲಿ ಅಧಿಕೃತವಾಗಿ ಕೊರೊನಾದಿಂದ ಮೃತರ ಸಂಖ್ಯೆ 9 ಎಂದು ಹೇಳಲಾಗುತ್ತಿದೆ. ಆದರೆ, ಸಚಿವರೇ 20-22 ಜನರ ಸಾವಿಗೆ ಸಾಂತ್ವನ ಹೇಳಿದ್ದಾರೆ. ನಾವು ಕೈಯಿಂದ ಪರಿಹಾರ ಕೊಟ್ಟಿದ್ದೇವೆ ಎಂದರು.
ಈ ಬಗ್ಗೆ ಉತ್ತರಿಸಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ. ರಾಘವನ್, ಈ- ಜನ್ಮ ತಂತ್ರಾಂಶದಲ್ಲಿ ಸಾವುಗಳನ್ನು ನಮೂದಿಸಲಾಗುತ್ತಿದೆ. ಇದರಲ್ಲಿ 684 ಸಾವುಗಳನ್ನು ದಾಖಲಿಸಲಾಗಿದೆ ಎಂದರು.
ಬಿಪಿಎಲ್ ಹಾಗೂ ಎಪಿಎಲ್ ಭೇದವಿಲ್ಲದೇ ಕೊರೊನಾದಿಂದ ಮೃತರಾದ ಕುಟುಂಬಕ್ಕೆ ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ಬಳಿ ಪ್ರಸ್ತಾಪಿಸಿರುವುದಾಗಿ ಹೇಳಿದ ಸಚಿವ ಭೈರತಿ ಬಸವರಾಜ್, ಸಾವುಗಳ ಬಗ್ಗೆ ಸರಿಯಾದ ವಿವರಗಳನ್ನು ದಾಖಲಿಸುವಂತೆ ಸೂಚಿಸಿದರು.
ಶಾಮನೂರು ಹನುಮಪ್ಪನ ದರ್ಶನ ಕೇಳಿದ ಶಾಸಕರು
ಶನಿವಾರ ಹಾಗೂ ಭಾನುವಾರಗಳಂದು ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಿರುವುದನ್ನು ಪ್ರಶ್ನಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ನಮ್ಮ ಮನೆ ದೇವರು ಶಾಮನೂರು ಹನುಮಂತಪ್ಪನ ದರ್ಶನಕ್ಕೆ ಶನಿವಾರ ಅವಕಾಶ ಇಲ್ಲದಂತಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಾನೂ ಸಹ ಹನುಮಂತ ದೇವರ ದರ್ಶನಕ್ಕೆ ತೆರಳುತ್ತೇನೆ. ಈಗಿನ ಸಂದರ್ಭದಲ್ಲಿ ಹೊರಗಿನಿಂದಲೇ ಕೈ ಮುಗಿದು ಬರುತ್ತಿದ್ದೇನೆ ಎಂದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಚಿವ ಬೈರತಿ ಬಸವರಾಜ, ಇನ್ನೂ 3-4 ತಿಂಗಳು ಇದ್ದಲ್ಲಿಂದಲೇ ದೇವರಿಗೆ ನಮಸ್ಕರಿಸಿ. ಪರಿಸ್ಥಿತಿ ಸರಿ ಆದ ಮೇಲೆ ದೇವಸ್ಥಾನಕ್ಕೆ ಹೋಗಬಹುದು ಎಂದರು.
ಜುಲೈನಲ್ಲಿ ಲಸಿಕೆ ಇಳಿಕೆ
ಜೂನ್ ತಿಂಗಳಿಗೆ ಹೋಲಿಕೆ ಮಾಡಿದರೆ ಜುಲೈನಲ್ಲಿ ನೀಡಲಾದ ಲಸಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಕಳಿಸುವ ಲಸಿಕೆ ಇಳಿಕೆಯಾಗಿರುವುದರಿಂದ ಜನರಿಗೆ ಲಸಿಕೆ ನೀಡುವುದೂ ಕಡಿಮೆಯಾಗಿದೆ ಎಂದು ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಲಸಿಕೆ ಪಡೆಯುವ ವಯೋಮಾನದ 12 ಲಕ್ಷ ಜನರಿದ್ದಾರೆ. ಇದುವರೆಗೂ 5.72 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಒಟ್ಟು ಶೇ.46ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದವರು ಹೇಳಿದ್ದಾರೆ.
ಜೂನ್ ತಿಂಗಳಲ್ಲಿ 1.76 ಲಕ್ಷ ಡೋಸ್ ಲಸಿಕೆ ಬಂದಿದ್ದರೆ, ಜುಲೈನಲ್ಲಿ 1.58 ಲಕ್ಷ ಡೋಸ್ ಲಸಿಕೆ ಬಂದಿದೆ. ಆಗಸ್ಟ್ ಮೊದಲ ವಾರದಲ್ಲಿ ಕೇವಲ 4,800 ಡೋಸ್ ಲಸಿಕೆ ಬಂದಿದೆ ಎಂದು ಮೀನಾಕ್ಷಿ ತಿಳಿಸಿದರು.
ಮಳೆಯಿಂದ 38 ಕೋಟಿ ರೂ. ನಷ್ಟ ಪರಿಹಾರಕ್ಕಾಗಿ ಸಿಎಂ ಬಳಿ ಪ್ರಸ್ತಾವನೆ : ಭೈರತಿ
ದಾವಣಗೆರೆ, ಆ. 6 – ಜಿಲ್ಲೆಯಲ್ಲಿ ಮಳೆ – ಪ್ರವಾಹದಿಂದಾಗಿ 38 ಕೋಟಿ ರೂ.ಗಳ ನಷ್ಟವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಂಡಜ್ಜಿಯಲ್ಲಿ ಸೇತುವೆ ಹಾಗೂ ರಸ್ತೆಗೆ ಹಾನಿಯಾಗಿದೆ. 2.5 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಳೆಗೆ ಮನೆ ಕಳೆದುಕೊಂಡವರ ಜೀವನಕ್ಕೆ ತೊಂದರೆಯಾಗದಂತೆ ಬೇಗ ಪರಿಹಾರಕ್ಕೆ ಸೂಚನೆ ಕೊಡಲಾಗಿದೆ. ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ಹಾನಿ ಕುರಿತು ವರದಿ ಸಲ್ಲಿಸಬೇಕು ಎಂದವರು ಹೇಳಿದರು.
ಮನೆಯ ಕೆಲ ಭಾಗ ಮಾತ್ರ ಕುಸಿದಿದ್ದರೂ ಸಹ ರಿಪೇರಿ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಸಂಪೂರ್ಣ ಕುಸಿತ ಎಂದೇ ಪರಿಗಣಿಸಿ ವರದಿ ಸಲ್ಲಿಸಬೇಕು ಎಂದವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹರಿಹರದ ಗಂಗಾನಗರ ಹಾಗೂ ಹೊನ್ನಾಳಿಯ ಬಾಲರಾಜ ಘಾಟ್ಗಳಲ್ಲಿ ಪ್ರತಿ ವರ್ಷ ಮನೆಗಳಿಗೆ ನೀರು ನುಗ್ಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಜನರಿಗೆ ಆಶ್ರಯ ಮನೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್. ರಾಮಪ್ಪ, ಹಿಂದಿನ ಬಾರಿಯ ಮಳೆ ಹಾನಿಗೆ ಇನ್ನೂ ಪರಿಹಾರ ಬಂದಿಲ್ಲ. ಈ ಬಾರಿಯೂ ವಿಳಂಬವಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ.97ರಷ್ಟು ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷ ಅತಿವೃಷ್ಟಿಯಿಂದ 1964 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಏಪ್ರಿಲ್ನಿಂದ ಈವರೆಗೆ 23 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, 583 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಈವರೆಗೆ 19 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೂ 35 ಲಕ್ಷ ರೂ. ಪರಿಹಾರ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾತೇಶ್ ಬೀಳಗಿ ಮಾಹಿತಿ ನೀಡಿದರು.
ಉಸ್ತುವಾರಿ ಭೈರತಿಗೆ ಎರಡನೇ ಇನ್ನಿಂಗ್ಸ್
ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೈರತಿ ಬಸವರಾಜ ಅವರೇ ಮತ್ತೆ ಬರಲಿದ್ದಾರೆ ಎಂದು ಶಾಸಕರಾದ ಎಸ್.ವಿ. ರಾಮಚಂದ್ರ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಭೈರತಿ ಅವರನ್ನು ಸನ್ಮಾನಿಸಿದ ಶಾಸಕ ಎಸ್.ವಿ.ರಾಮಚಂದ್ರ, ಎರಡನೇ ಇನ್ನಿಂಗ್ಸ್ಗೆ ಸ್ವಾಗತ ಎಂದರು. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೂ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಪ್ರಕಟಿಸಿದ ಸಭೆಯ ಅಜೆಂಡಾದಲ್ಲೂ ಸಹ ಭೈರತಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂದೇ ಸಂಬೋಧಿಸಲಾಗಿತ್ತು.
ಮುಂದುವರೆದು ಮಾತನಾಡಿದ ಶಾಸಕ ರಾಮಚಂದ್ರ, ಉಚ್ಚಂಗಿದುರ್ಗ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಅದು ಬಳ್ಳಾರಿ ಜಿಲ್ಲೆಗೆ ಸೇರಿದೆ. ಅಲ್ಲಿ 9 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಪರಿಹಾರಕ್ಕಾಗಿ ಅವರು ಬಳ್ಳಾರಿ – ಹೊಸಪೇಟೆಗಳಿಗೆ ಅಲೆಯುವಂತಾಗಿದೆ. ಸಾವಿಗೆ ನಿಯಮ ಇಲ್ಲ, ನಿಯಮ ಬಿಟ್ಟು ಪರಿಹಾರ ಕೊಡಿ ಎಂದರು.
ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಈಗಾಗಲೇ ಬಳ್ಳಾರಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಎಲ್ಲ ಪ್ರಕರಣಗಳಲ್ಲೂ ಪರಿಹಾರ ಕೊಡಿಸಲಾಗುವುದು ಎಂದರು.
4ನೇ ಅಲೆ ಬರುತ್ತೆ : ಚನ್ನಗಿರಿ ತಾಲ್ಲೂಕು ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು 1 ಕೋಟಿ ರೂ. ಅನುದಾನ ಬಂದಿದೆ. ಆದರೆ, ಅದನ್ನು ಬಳಸಿಕೊಳ್ಳುವುದು 3 ತಿಂಗಳಿನಿಂದ ವಿಳಂಬವಾಗಿದೆ. ಹೀಗಾದರೆ ಸೌಲಭ್ಯ ಕಲ್ಪಿಸುವಷ್ಟರಲ್ಲಿ ನಾಲ್ಕನೇ ಕೊರೊನಾ ಅಲೆ ಬಂದಿರುತ್ತದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಿಲಿಂಡರ್ ಇಲ್ಲ : ಮಲೇಬೆನ್ನೂರಿನ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ಘಟಕ ಸಿದ್ಧವಾಗಿದೆ. ಆದರೆ, ಸಿಲಿಂಡರ್ ಇಲ್ಲ ಎಂಬ ಏಕೈಕ ಕಾರಣದಿಂದ ಇನ್ನೂ ಘಟಕ ಆರಂಭಿಸಿಲ್ಲ. ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಕೆಲಸ ಆಗುತ್ತಿಲ್ಲ ಎಂದು ಹರಿಹರ ಶಾಸಕ ಎಸ್. ರಾಮಪ್ಪ ಆಕ್ಷೇಪಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಆಕ್ಸಿಜನ್ ಘಟಕಗಳನ್ನು ಶೀಘ್ರದಲ್ಲೇ ಕಾರ್ಯಾರಂಭ ಮಾಡುವಂತೆ ಸಚಿವ ಭೈರತಿ ಅಧಿಕಾರಿಗಳಿಗೆ ಸೂಚಿಸಿದರು.
ಮೂರನೇ ಕೊರೊನಾ ಅಲೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸೇರಿದಂತೆ ಎಲ್ಲ ಸೌಲಭ್ಯಗಳು ಸಿದ್ಧವಾಗಿರಬೇಕು. ಹೊರಗಿನಿಂದ ಬಂದವರ ಕೊರೊನಾ ಟೆಸ್ಟ್ ಮಾಡಬೇಕು ಎಂದು ಭೈರತಿ ತಿಳಿಸಿದರು.
ಸಭೆಯಲ್ಲಿ ಶಾಸಕ ಪ್ರೊ. ಲಿಂಗಣ್ಣ, ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪಂಚಾಯ್ತಿ ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಎಸ್ಪಿ ಸಿ.ಬಿ. ರಿಷ್ಯಂತ್ ಮತ್ತಿತರರು ಉಪಸ್ಥಿತರಿದ್ದರು.