ಮಲೇಬೆನ್ನೂರು, ಮಾ.25- ಇಲ್ಲಿನ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸು ಗುರುವಾರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆಯಿಂದಲೂ ದರ್ಗಾದಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ, ಚಾದರ ಹೊದಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಲೇಬೆನ್ನೂರು ಅಷ್ಟೇ ಅಲ್ಲದೇ ಹರಿಹರ, ದಾವ ಣಗೆರೆ, ರಾಣೇಬೆನ್ನೂರು, ವಿಜಾಪುರ, ಹೊನ್ನಾಳಿ, ಚನ್ನಗಿರಿ, ಬಸವಾಪಟ್ಟಣ ಸೇರಿದಂತೆ ಮತ್ತಿತರೆ ನಗರ, ಪಟ್ಟಣ, ಹಳ್ಳಿಗಳಿಂದ ಭಕ್ತರು ಇಲ್ಲಿನ ದರ್ಗಾಕ್ಕೆ ಭೇಟಿ ನೀಡಿದರು.
ದರ್ಗಾ ಆವರಣದಲ್ಲಿ ರಾತ್ರಿ ಹಮ್ಮಿಕೊಂಡಿದ್ದ ಪ್ರಸಿದ್ದ ಖವ್ವಾಲಿ ಕಾರ್ಯಕ್ರಮದಲ್ಲಿ ದೆಹಲಿಯ ಚಾಂದ್ ಖಾದ್ರಿ ಮತ್ತು ಮುಂಬೈನ ಅಜೀಮ್ ನಾಜಾ ಅವರು ಪೈಪೋಟಿ ಮೇಲೆ ಹೇಳಿದ ಖವ್ವಾಲಿ ಹಾಡುಗಳು ಎಲ್ಲರ ಗಮನ ಸೆಳೆದವು. ಉರುಸು ಅಂಗವಾಗಿ ದರ್ಗಾವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಪೊಲೀಸ್ ಇಲಾಖೆಯವರು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರು. ಮಾಸ್ಕ್, ಸ್ಯಾನಿಟೈಜ್ ಬಳಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರಚಾರ ಮಾಡುತ್ತಿದ್ದರು. ಸಿಪಿಐ ಸತೀಶ್, ಪಿಎಸ್ಐ ವೀರಬಸಪ್ಪ ಕುಸಲಾಪುರ, ಗ್ರಾಮಾಂತರ ಪಿಎಸ್ಐ ರವಿಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.