ಲೇಡಿಸ್ ಕ್ಲಬ್ ನ ಸೂಪರ್ ಮಾಮ್ಸ್ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಹೇಮಾಕ್ಷಿ ಅಭಿಮತ
ದಾವಣಗೆರೆ, ಮಾ.25- ಮಹಿಳೆಯರು ನೈಜ ಜೀವನದ ಸೂಪರ್ ಮಾಮ್ಸ್ ಎಂದು ಧಾರವಾಡದ ಸಮಾಜ ಸೇವಕಿ ಹೇಮಾಕ್ಷಿ ಸಿ. ಕಿರೇಸೂರು ಅಭಿಪ್ರಾಯಪಟ್ಟರು.
ಅವರು, ಇಂದು ಸಂಜೆ ನಗರದ ಎಂಸಿಸಿ `ಬಿ’ ಬ್ಲಾಕ್ನ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ದಾವಣಗೆರೆ ಲೇಡಿಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೂಪರ್ ಮಾಮ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರ ರಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು, ಗಂಡ, ಅತ್ತೆ, ಮಾವ ಸೇರಿದಂತೆ ಕುಟುಂಬವನ್ನೇ ಸಂಬಾಳಿಸಲು ಸಶಕ್ತರಾಗಿ ರುವ ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಸೂಪರ್ ಮಾಮ್ಸ್ ಬಿರುದಿಗಿಂತ ಜೀವನದ ಪ್ರತಿಯೊಂದು ಘಟ್ಟದಲ್ಲೂ ನಮಗೆ ನಾವೇ ಸೂಪರ್ ಮಾಮ್ಸ್ ಆಗಿದ್ದೇವೆ. ಪ್ರತಿಯೊಬ್ಬ ಮಹಿಳೆಯರಲ್ಲಿ ಪ್ರತಿಭೆ ಇದೆ. ಏನೇ ಕಷ್ಟ ಬಂದರೂ ಸಹ ಎದೆ ಗುಂದದೆ ಆತ್ಮವಿಶ್ವಾಸ ದಿಂದ ಬದುಕಿನ ದಾರಿಯುದ್ದಕ್ಕೂ ನಡೆಯಬೇಕು ಎಂದು ತಿಳಿಸಿದರು.
ಆತ್ಮಸ್ಥೈರ್ಯ ತುಂಬುವ ಇಂತಹ ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಬಹುಮುಖ್ಯ. ಆತ್ಮವಿಶ್ವಾಸ ಇರಲಿ. ನೀವು ನೀವಾಗಿರಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ನಮ್ಮ ದೇಶ ಸಂಸ್ಕೃತಿ, ಸಂಸ್ಕಾರದ ತವರೂರು. ಈ ಸ್ಪರ್ಧೆಯಲ್ಲಿನ ವೇಷ-ಭೂಷಣಗಳು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುವ ಮುಖೇನ ಅವುಗಳನ್ನು ಎತ್ತಿ ಹಿಡಿಯಲಾಗುತ್ತಿದೆ. ಮಹಿಳೆಗೂ ಕೂಡ ಸ್ವಾತಂತ್ರ್ಯ, ಸಮಾನತೆಯ ಜೊತೆಗೆ ಪ್ರತಿಭೆಗೆ ತಕ್ಕಂತಹ ಅವಕಾಶವನ್ನು ದಾವಣಗೆರೆ ಲೇಡಿಸ್ ಕ್ಲಬ್ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಮಾತನಾಡಿ, ಮಹಿಳೆಯರನ್ನು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿಸದೇ ಅವರ ಲ್ಲಿರುವ ಪ್ರತಿಭೆ, ಸಂಸ್ಕೃತಿ, ಕಲೆಗಳ ಅನಾವ ರಣಕ್ಕೆ ಈ ಕ್ಲಬ್ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ. ಮುಂದಿನ ದಿನಗಳಲ್ಲೂ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ನಾನು ಸಹ ಭಾಗವಹಿಸುತ್ತೇನೆಂದರು.
ಮತ್ತೋರ್ವ ತೀರ್ಪುಗಾರರಾದ ಶಶಿಕಲಾ ಡಿ. ಹೆಬ್ಳೇಕರ್ ಮಾತನಾಡಿ, ಜೀವನದಲ್ಲಿ ಏರು-ಪೇರುಗಳು ಸಹಜ. ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದರೆ ಸಮಸ್ಯೆಗಳಿಗೆ ಹೆದರದೇ ಧೈರ್ಯವಾಗಿ ಮುನ್ನುಗ್ಗಬೇಕು. ಮಾನಸಿಕವಾಗಿ ಬಲಶಾಲಿಗಳಾಗಬೇಕು. ಆತ್ಮವಿಶ್ವಾಸ ಕುಗ್ಗಿಸಿಕೊಳ್ಳಬಾರದು. ನಾವು ಸಶಕ್ತರಾಗಿದ್ದಾಗ ಜೀವನದಲ್ಲಿ ಸೂಪರ್ ಮಾಮ್ಸ್ ಗಳಾಗಲು ಸಾಧ್ಯವೆಂದರು.
ಕ್ಲಬ್ ನ ಸಂಸ್ಥಾಪಕಿ ಅಮೀರಾ ಬಾನು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಮಹಿಳಾ ಸಾಧಕಿಯರಾದ ಮಹಿಳಾ ಉದ್ಯಮಿ ಶಾರದ ರಾಯ್ಕರ್, ಅಂಗನವಾಡಿ ಶಿಕ್ಷಕಿ ರೇಣುಕಮ್ಮ, ಹಣ್ಣಿನ ವ್ಯಾಪಾರಿ ಕಾಮಾಕ್ಷಮ್ಮ, ಪಾರ್ವತಮ್ಮ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕ್ಲಬ್ ಅಧ್ಯಕ್ಷೆ ದಾಕ್ಷಾಯಿಣಿ ಅಂದಾನಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಸಾಂಸ್ಕೃತಿಕ ಕಾರ್ಯದರ್ಶಿ ಪದ್ಮ ಪ್ರಿಯ ರಾಘವೇಂದ್ರ, ಮಾಧ್ಯಮ ಪ್ರಮುಖರಾದ ಲಕ್ಷ್ಮಿ ಸತೀಶ್, ಕಾರ್ಯದರ್ಶಿ ಭಾಗ್ಯ ಪಿಸಾಳೆ, ಕೋಶಾಧ್ಯಕ್ಷೆ ಯಶೋಧ ಸುರೇಶ್, ಕೋ ಆರ್ಡಿನೇಟರ್ ಸಂಧ್ಯಾರಾಣಿ, ಉಪಾಧ್ಯಕ್ಷೆ ರಾಜೇಶ್ವರಿ, ಸಹ ಕಾರ್ಯದರ್ಶಿ ಸುಮ ಮಲ್ಲಿಕಾರ್ಜುನ್, ನಾಗರತ್ನ ಸೇರಿದಂತೆ ಇತರರು ಇದ್ದರು.
ಜಯಶೀಲ ಪ್ರಾರ್ಥಿಸಿದರು. ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಚೇತನಾ ಶಿವಕುಮಾರ್ ನಿರೂಪಿಸಿದರು. ವಿನೋದ ಶೇಟ್ ಸ್ವಾಗತಿಸಿದರು.
ತಾಯಂದಿರ ರಾಂಪ್ ವಾಕ್: ಈ ಸ್ಪರ್ಧೆಯಲ್ಲಿ ಯುವತಿಯರು, ತಾಯಂದಿರು ಸೇರಿ ಒಟ್ಟು 65ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. 35 ರಿಂದ 50, 50 ರಿಂದ 60, 50 ರಿಂದ 75 ವರ್ಷದ ತಾಯಂದಿರು, ಯುವತಿಯರು ನಾಚುವಂತೆ ಭಾರತೀಯ ಸಂಸ್ಕೃತಿ ಬಿಂಬಿಸುವ ಉಡುಗೆ-ತೊಡುಗೆಗಳನ್ನು ಧರಿಸಿ ರಾಂಪ್ ವಾಕ್ ಮಾಡುತ್ತಾ ಗಮನ ಸೆಳೆದರು. ಯುವತಿಯರು ಸಹ ರಾಂಪ್ ವಾಕ್ ಮಾಡಿದರು. ಯುವ ಸಮೂಹದ ನೃತ್ಯ, ಹಾಡು, ಗಿಟಾರ್ ವಾದನ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿದವು.