ಬೆಲೆ ಏರಿಕೆ : ಜೆಡಿಎಸ್ ಪ್ರತಿಭಟನೆ

ದಾವಣಗೆರೆ, ಜೂ.28- ಬೆಲೆ ಏರಿಕೆ ನಿಯಂತ್ರಣ, ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇಂದು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದ ಬಾಧಿತರಾಗಿ ಸಂಕಷ್ಟದಿಂದ ರಾಜ್ಯದ ಜನತೆ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರ, ರೈತ, ಕಾರ್ಮಿಕರ, ಬದುಕಿನ ಮೇಲೆ ಬರೆ ಎಳೆಯುವ ರೀತಿ ಇಂಧನ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ವಿದ್ಯುತ್ ದರ, ರಸಗೊಬ್ಬರ ಮುಂತಾದವುಗಳನ್ನು ಬೆಲೆ ಗಗನಕ್ಕೇರಿಸಿ, ಜನ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ  ಮಾಡಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. 

ಕೊರೊನಾ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಸಾವಿ ರಾರು ಕುಟುಂಬಗಳಲ್ಲಿನ  ದುಡಿಯುವ ವ್ಯಕ್ತಿ ಸಾವನ್ನಪ್ಪಿ, ಕುಟುಂಬಸ್ಥರು ನಿರ್ಗತಿಕರಾಗಿ ಬೀದಿ ಪಾಲಾಗಿದ್ದಾರೆ. ಅಲ್ಲದೇ, ಎಷ್ಟೋ ಕುಟುಂಬಗಳಲ್ಲಿ ತಂದೆ, ತಾಯಿಗಳು ಮರಣ ಹೊಂದಿ ಮಕ್ಕಳು ಅನಾಥರಾಗಿದ್ದಾರೆ. ಅದೇ ರೀತಿ  ಲಾಕ್‌ಡೌನ್‌ನಿಂದ ರೈತ ಸಮುದಾಯ ತಾನು ಬೆಳೆದ ಆಹಾರ ಸಾಮಗ್ರಿ, ತರಕಾರಿ ಮತ್ತು ಹಣ್ಣು ಹಂಪಲಗಳನ್ನು ಕಟಾವು ಮಾಡದೇ, ಖರೀದಿ ಮಾಡಲು ವರ್ತಕರು ಮುಂದೆ ಬರದೇ ತಮ್ಮ ಸರ್ವಸ್ವವನ್ನೂ ಒತ್ತೆ ಇಟ್ಟು ಬೆಳೆದ ಫಸಲನ್ನು ಹೊಲದಲ್ಲಿ ಕೊಳೆಯಲು ಬಿಟ್ಟು ನಿರ್ಗತಿಕರಾ ಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆ ಇಲ್ಲದೇ ಶ್ರೀಸಾಮಾನ್ಯ ಮತ್ತು ರೈತ ಸಮುದಾಯ ಒಳಗೊಂಡಂತೆ ಇತರರು ಬಳಸುವ ದಿನನಿತ್ಯ ಮತ್ತು ದೈನಂದಿನ ಬಳಕೆಯ ಪದಾರ್ಥಗಳ ಮತ್ತು ಗೊಬ್ಬರ  ಬೆಲೆಯನ್ನು ಗಗನಕ್ಕೆ ಏರಿಸಿ ರುವುದು ಖಂಡನೀಯ ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಹೊದಿಗೆರೆ ರಮೇಶ್, ‌ಜೆ. ಅಮಾನುಲ್ಲಾ ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!