ಬೆಂಗಳೂರು, ಮಾ. 25 – ಯುಗಾದಿ, ಹೋಲಿ, ಶಬ್ – ಎ ಬರಾತ್, ಗುಡ್ ಫ್ರೈಡೆ ಸೇರಿದಂತೆ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸದಂತೆ ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಕೋಪ ನಿರ್ವಹಣಾ ಕಾಯ್ದೆಯ ಅನ್ವಯ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಜನರು ಹಬ್ಬಗಳ ಸಮಯದಲ್ಲಿ ಗುಂಪು ಗೂಡುವುದರಿಂದ ರಾಜ್ಯದಲ್ಲಿ ಕೊರೊನಾ ತಡೆಯಲು ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬಗಳ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವುದನ್ನು ತಡೆಯಬೇಕಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನಗಳು, ಸಾರ್ವಜನಿಕ ಪಾರ್ಕುಗಳು, ಮಾರುಕಟ್ಟೆ, ಧಾರ್ಮಿಕ ಸ್ಥಳ ಮತ್ತಿತರೆ ಕಡೆಗಳಲ್ಲಿ ಹಬ್ಬದ ಸಮಯದಲ್ಲಿ ಜನ ಸೇರುವುದನ್ನು ತಡೆಯಬೇಕೆಂದು ತಿಳಿಸಲಾಗಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ವಿಕೋಪ ನಿರ್ವಹಣೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಸಹ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಇತ್ತೀಚಿನವರೆಗೂ ಕಡಿಮೆಯಾಗಿತ್ತಾದರೂ, ಮಾರ್ಚ್ ನಂತರದಲ್ಲಿ ತೀವ್ರವಾಗಿ ಏರುಮುಖವಾಗಿದೆ. ರಾಜ್ಯದಲ್ಲಿ ಎರಡನೇ ಕೊರೊನಾ ಅಲೆ ಆರಂಭವಾಗಿದೆ ಎಂದು ಆರೋಗ್ಯ ಸಚಿವ ಡಿ. ಸುಧಾಕರ್ ತಿಳಿಸಿದ್ದರು.
ಗುರುವಾರ ಒಂದೇ ದಿನ ರಾಜ್ಯದಲ್ಲಿ 2,523 ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿನಿಂದ ಹತ್ತು ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 1,623 ಸೋಂಕಿತರು ಕಂಡು ಬಂದಿದ್ದಾರೆ.