ಮಹಾನಗರ ಪಾಲಿಕೆ ತಕ್ಷಣ ಗಿಡಗಳನ್ನು ಹಾಕಲು ಕಾರ್ಯಪ್ರವೃತ್ತವಾಗಲಿ

ಮಾನ್ಯರೇ,

ಮಳೆಗಾಲದ ಜೂನ್- ಜುಲೈ ತಿಂಗಳಲ್ಲಿ ಗಿಡಗಳನ್ನು ಹಾಕಿದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಆದರೆ ಫಾರೆಸ್ಟ್ ಆಫೀಸ್‍ನಲ್ಲಿ ಸಾಕಷ್ಟು ಸಸಿಗಳಿದ್ದರೂ ಖಾಸಗಿಯಾಗಿ ಹಾಕುವಂತಹ ಸಾರ್ವಜನಿಕರಿಗೆ, ಸಂಸ್ಥೆಗಳಿಗೆ, ಟ್ರಸ್ಟ್‍ಗಳಿಗೆ ಕೊಡಲು ಒಪ್ಪುತ್ತಿಲ್ಲ. 

ಏಕೆಂದರೆ ಮುನ್ಸಿಪಾಲಿಟಿಯಿಂದ ಒಂದು ವಾರ್ಡ್‍ಗೆ 1000 ಗಿಡಗಳನ್ನು ಹಾಕಲು ಈ ಗಿಡಗಳನ್ನು ಬೆಳೆಸಿರುವುದು ಎಂದು ಕಾರಣ ಕೊಡುತ್ತಾರೆ. ಆದರೆ ಗಿಡಗಳನ್ನು ನೆಡುವ ಪ್ರಕ್ರಿಯೆ ಎಲ್ಲೂ ನಡೆಯುತ್ತಿಲ್ಲ. ಇದುವರೆಗೂ ಟೆಂಡರ್ ಪ್ರಕ್ರಿಯೆ ಆಗಿಲ್ಲ ಎಂದು ಗಿಡಗಳನ್ನು ಹಾಕದೆ ಸುಮ್ಮನೆ ಉಳಿಸಿಕೊಂಡಿರುವುದು ಸರಿಯಲ್ಲ. `ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬಾರದು’ ಎನ್ನುವ ಗಾದೆಯಂತೆ ಮಳೆಗಾಲದಲ್ಲಿ ಬಿಟ್ಟು ಸೆಪ್ಟೆಂಬರ್, ಅಕ್ಟೋಬರ್‍ನಲ್ಲಿ ಗಿಡ ನೆಟ್ಟರೆ ಪ್ರಯೋಜನವಿಲ್ಲ. 

ದಯವಿಟ್ಟು ಮಹಾನಗರ ಪಾಲಿಕೆ ಇದನ್ನು ಮನಗಂಡು, ತಕ್ಷಣ ತಮ್ಮ ಪ್ರಕ್ರಿಯೆಗಳನ್ನು ಮುಗಿಸಿ ಗಿಡಗಳನ್ನು ನೆಡಲು ಮುಂದಾಗಬೇಕು. ಇಲ್ಲ ಖಾಸಗಿಯಾಗಿ ಗಿಡ ನೆಡಲು ಬಯಸುವವರಿಗೆ ಸಸಿಗಳನ್ನಾದರು ಒದಗಿಸಬೇಕು. ಜೊತೆಗೆ ಸಸಿಗಳನ್ನು ನೆಟ್ಟಮೇಲೆ 3 ವರ್ಷ ಕಾಪಾಡುವಂತಹ ಎಲ್ಲ ಪ್ರಯತ್ನ ಮಾಡಲೇಬೇಕೇ ವಿನಃ ಗಿಡಗಳನ್ನು ನೆಟ್ಟು ಸಂರಕ್ಷಿಸದೆ ಸಾಯಿಸುವುದು ಮಹಾಪರಾಧ.


– ಶಿವನಕೆರೆ ಬಸವಲಿಂಗಪ್ಪ, ಪರಿಸರ ಜಾಗೃತಿ ಸಮುದಾಯ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!