ಬೆಂಗಳೂರು, ಮಾ. 24 – ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಸದ್ಯಕ್ಕಿಲ್ಲ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಹುದ್ದೆಗಳನ್ನು ಭರ್ತಿ ಮಾಡಿದರೆ, ಬೊಕ್ಕಸಕ್ಕೆ ವಾರ್ಷಿಕ 12,000 ಕೋಟಿ ರೂ. ಹೊರೆ ಬೀಳುತ್ತದೆ ಎಂದು ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದಿಂದ ಜರ್ಝರಿತಗೊಂಡಿರುವ ನಮ್ಮ ಆರ್ಥಿಕ ಸ್ಥಿತಿಯನ್ನು ಪುನಃಶ್ಚೇತನಗೊಳಿಸಬೇಕಿದೆ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಸೋರಿಕೆ ತಡೆಗಟ್ಟಿ, ಆದಾಯ ಮೂಲವನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ, ಅಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.
ಈ ಹಿಂದೆ, ವಿವಿಧ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಿಗೆ ನೀಡಿರುವ ಸಾಲವನ್ನು ವಸೂಲಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಕ್ರಮಗಳಿಂದ ಸರ್ಕಾರದ ಸಾಲೇತರ ಬಂಡವಾಳ ಸ್ವೀಕೃತಿಗಳನ್ನು ಹೆಚ್ಚಿಸಬಹುದು ಹಾಗೂ ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ ಪಡೆಯುವ ಮಾರುಕಟ್ಟೆ ಸಾಲದ ಅವಲಂಬನೆ ಕಡಿಮೆ ಮಾಡಬಹುದು ಎಂದರು.
ಕಾಂಗ್ರೆಸ್ ಸದಸ್ಯರ ಧರಣಿ ನಡುವೆ, ಬಜೆಟ್ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ ಅವರು, 2021-22 ನೇ ಸಾಲಿನ ಆಯವ್ಯಯವು ಎಲ್ಲಾ ವರ್ಗದವರ ಹಿತ ಕಾಪಾಡುವುದರ ಜೊತೆಗೆ ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಹಿಂಜರಿಕೆಯನ್ನು ಕೋವಿಡ್ ಪೂರ್ವ ದಿನಗಳಲ್ಲಿದ್ದ ಬೆಳವಣಿಗೆ ಪಥಕ್ಕೆ ತರಲು ಸರ್ಕಾರದ ಅಭಿವೃದ್ಧಿಯ ಮುನ್ನೋಟವನ್ನು ಪ್ರಸ್ತುತ ಪಡಿಸಿದ್ದೇನೆ. ಆದಾಯ ಸಂಗ್ರಹಣೆ ಜೊತೆಗೆ ರಾಜ್ಯದ ಒಟ್ಟಾರೆ ಕ್ಷೇಮಾಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದು ಭರವಸೆ ನೀಡಿದರು.
ಎಲ್ಲ ಕ್ಷೇತ್ರಗಳಿಗೂ ನ್ಯಾಯ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 500 ಕೋಟಿ ರೂ. ಅನುದಾನ ಒದಗಿಸಿದ್ದರಿಂದ ನನ್ನನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಗೆ 2,316 ಕೋಟಿ ರೂ. ಅನುದಾನ ಒದಗಿಸಲಾಗಿದೆ, ಇತರೆ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೂ 1,000 ಕೋಟಿ ರೂ. ಅನುದಾನ ನೀಡುತ್ತೇವೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರೂ. ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ 3,000 ಕೋಟಿ ರೂ. ಒದಗಿಸಲಾಗಿದೆ, ಇದರೊಂದಿಗೆ ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸಿದ್ದೇವೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜನರಿಗೆ ಯಾವುದೇ ತೆರಿಗೆ, ಸರ್ಚಾರ್ಜ್, ಸೆಸ್ ವಿಧಿಸದೆ ಜನಪರವಾದ ಆಯವ್ಯಯ ಮಂಡನೆ ಮಾಡಲಾಗಿದೆ. ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ, ಇಲ್ಲವೇ ಔತಣಕೂಟ ನಡೆಸಲು ಸಾಲ ಮಾಡಿಲ್ಲ. ಸಾಂಕ್ರಾಮಿಕ ರೋಗದಿಂದ ಜನರ ಜೀವ ರಕ್ಷಣೆ ಮಾಡುವುದು ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗಿದ್ದ ಸಂಕಷ್ಟಗಳಿಗೆ ಅಗತ್ಯ ಪರಿಹಾರ ಕೈಗೊಳ್ಳಲು ಸಾಲ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.
ಅನೇಕ ಸರ್ಕಾರಗಳು, ಎಲ್ಲವೂ ಚೆನ್ನಾಗಿದ್ದಾಗಲೇ ಸಾಲ ಮಾಡಿರುವ ಉದಾಹರಣೆಗಳಿವೆ.
ಕೇಂದ್ರ ಸರ್ಕಾರ 2021-22 ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್‍ಡಿಪಿ ಶೇ. 4 ರವರೆಗೆ ಸಾಲ ಪಡೆಯಲು ಅನುಮತಿ ನೀಡಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ತಿದ್ದುಪಡಿ ತಂದು ಈ ಅವಕಾಶ ಬಳಸಿಕೊಂಡಿದ್ದೇವೆ, ಜೊತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದರು.
ದಾಖಲೆಗಳಲ್ಲಿ ಎಲ್ಲ ವಿಚಾರಗಳನ್ನೂ ಬಹಿರಂಗಪಡಿಸಲಾಗಿದೆ, ಸಣ್ಣ ಲೋಪದೋಷವಿದ್ದರೂ ಸರಿಪಡಿಸಲಾಗುತ್ತದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಪ್ರಸಕ್ತ ಸಾಲಿನಲ್ಲೂ ಕೋವಿಡ್ ಪರಿಣಾಮ ಬೀರುವ ಸಂಭವವಿದೆ, ಈ ವರ್ಷ 15,134 ಕೋಟಿ ರೂ. ರಾಜಸ್ವ ಕೊರತೆ ಉಂಟಾಗಲಿದೆ ಎಂಬ ಆತಂಕವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಪ್ರಸಕ್ತ ವರ್ಷ ಕಡಿಮೆ ಅನುದಾನ ಇಟ್ಟಿದ್ದರೂ ಮುಂದಿನ ವರ್ಷ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.