ಜನರ ಸಹಾಯಕ್ಕೆ ಬರುವುದು ಸಮಾಜದ ನೈತಿಕ ಜವಾಬ್ದಾರಿ

ಸ್ಲಂ ಜನಾಂದೋಲನ ಕರ್ನಾಟಕ ಸಮಿತಿ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‍ಕುಮಾರ್

ದಾವಣಗೆರೆ, ಜೂ.25 – ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವ ಇಂದಿನ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆಗೆ ಸಂಕಷ್ಟಕ್ಕೆ ಒಳಗಾದ ಜನರ ಸಹಾಯಕ್ಕೆ ಬರಬೇಕಾಗಿರುವುದು ಮಾನವೀಯ ಸಮಾಜದ ನೈತಿಕ ಜವಾಬ್ದಾರಿಯೂ ಸಹ ಆಗಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್‍ಕುಮಾರ್ ಪ್ರತಿಪಾದಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಮಿತಿ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ದಾವಣಗೆರೆ ಜಿಲ್ಲಾ ಸಮಿತಿ, ಎಪಿಪಿಐ ಸಹಯೋಗದಲ್ಲಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಿಲ್ಲಾ ಪಂಚಾಯತಿ ಎದುರಿನ ವಿಮಾನ ಮಟ್ಟಿ ಚಾನಲ್ ಏರಿಯಾದಲ್ಲಿ ಕೋವಿಡ್ ಸಂಕಷ್ಟದಲ್ಲಿನ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂಕಿ-ಅಂಶಗಳ ಪ್ರಕಾರ ಕೊರೊನಾ ಸೋಂಕಿಗಿಂದ ಹಸಿವಿನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ವಿಷಯ ಎಂದು ಅವರು ಹೇಳಿದರು. 

ಕೋವಿಡ್‍ನಂತಹ ಸಾಂಕ್ರಾ ಮಿಕ ರೋಗದಿಂದಾಗಿ ಬಡತನ ಹೆಚ್ಚಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಜನರ ಜೀವನ ಕ್ರಮ ಬದಲಾಗಿ ಸಂಘ ಜೀವಿಯಾಗಿದ್ದ ಮನುಷ್ಯ ಇಂದು ಏಕಾಂಗಿ ಯಾಗಿ ಜೀವ, ಜೀವನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಘನತೆಯ ಬದುಕನ್ನು ಕಟ್ಟಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಸ್ಲಂ ಜನಾಂದೋಲನ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಮಾತನಾಡಿ,  ಲಾಕ್‍ಡೌನ್ ಅವಧಿಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 10 ಸಾವಿರ ರೂ.ಗಳನ್ನು ಪರಿಹಾರವಾಗಿ ಘೋಷಣೆ ಮಾಡುವಂತೆ, ಕೋವಿಡ್ ಸಮಯದಲ್ಲಿ ಸೋಂಕಿಗೆ ಒಳಗಾದವರ ಚಿಕಿತ್ಸಾ ವೆಚ್ಚ ಸಂಪೂರ್ಣ ಸರ್ಕಾರವೇ ಭರಿಸಬೇಕು. ಸೋಂಕಿನಿಂದ ಮರಣ ಹೊಂದಿದವರ ಕುಟುಂಬಕ್ಕೆ ನೀಡುತ್ತೇವೆ ಎಂದು ಹೇಳಲಾಗಿರುವ 1 ಲಕ್ಷ ರೂ. ಪರಿಹಾರವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಹಾವೇರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಮಕ್ಕಳ ಮೇಲೆ ಬೀರಲಿರುವ ಕೋವಿಡ್‍ನ 3ನೇ ಅಲೆಗೂ ಮುನ್ನ ಎಲ್ಲರಿಗೂ ವಿಮೆಯ ಮೂಲಕ ಉಚಿತ ಚಿಕಿತ್ಸೆಗೆ ನೆರವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಶಬ್ಬೀರ್‍ಸಾಬ್, ಅಧ್ಯಕ್ಷೆ ಶಹೀನಾಬೇಗಂ, ಪದಾಧಿಕಾರಿಗಳಾದ ಸಾವಿತ್ರಮ್ಮ, ಬಾಲಪ್ಪ, ಸುಹೀಲ್‍ ಭಾಷಾ ಮತ್ತು ಗೃಹ ಕಾರ್ಮಿಕರ ಸಂಘದ ಕಾರ್ಯದರ್ಶಿ ರಂಗಮ್ಮ, ಲಕ್ಷ್ಮಿ,
ರಮೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!