ಕೊರೊನಾ ಸಕಾರಾತ್ಮಕ ಪರಿಣಾಮಗಳನ್ನೂ ಬೀರಿದೆ

ದೈವಜ್ಞ ಸಮಾಜದವರಿಗೆ ಸಾಮೂಹಿಕ ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ಲೇಷಣೆ

ದಾವಣಗೆರೆ, ಜೂ.25- ಕೊರೊನಾ ಕೇವಲ ನಕಾರಾತ್ಮಕ ಪರಿಣಾಮಗಳನ್ನಷ್ಟೇ ನಮ್ಮ ಮೇಲೆ ಬೀರಿಲ್ಲ. ಬದಲಾಗಿ, ಸಕರಾತ್ಮಕ ಪರಿಣಾಮಗಳನ್ನೂ ಕೂಡ ಉಂಟುಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಆರೋಗ್ಯ ಕ್ಷೇತ್ರದಲ್ಲಿ ನಾವು ಸಾಕಷ್ಟು ಸ್ವಾವಲಂಬಿಯಾಗಿದ್ದೇವೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಹೇಳಿದರು.

ನಗರದ ದೈವಜ್ಞ ಯುವ ಘಟಕದ ವತಿಯಿಂದ ಅಕ್ಕಸಾಲಿಗ ಕುಶಲಕರ್ಮಿಗಳಿಗಾಗಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ಇಂದು ಹಮ್ಮಿಕೊಂಡಿದ್ದ ಸಾಮೂಹಿಕ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರವು ಮೂಲಭೂತ ಸೌಕರ್ಯಗಳನ್ನು ಹೊಂದುವ ಮೂಲಕ ಸಾಕಷ್ಟು ಸದೃಢವಾಗಿದೆ.  ಕೊರೊನಾ ಬರುವುದಕ್ಕಿಂತ ಮುಂಚೆ ಒಂದೂ ಕೂಡ ಎನ್ 95 ಮಾಸ್ಕ್ ನಮ್ಮ ದೇಶದಲ್ಲಿ ತಯಾರಾಗುತ್ತಿದ್ದಿಲ್ಲ, ಈಗ ಪ್ರತಿದಿನ ಕೋಟ್ಯಾಂತರ ಮಾಸ್ಕ್‍ಗಳನ್ನು ತಯಾರಿಸುವ ಮಟ್ಟಕ್ಕೆ ಭಾರತ ಬೆಳೆದಿದೆ. ಇದಿಷ್ಟನ್ನು ನಮಗೆ ಕಲ್ಪಿಸಿಕೊಟ್ಟಿದ್ದು `ಆತ್ಮ ನಿರ್ಭರ್‌ ಭಾರತ’ ಎನ್ನುವ ಮಂತ್ರ ಎಂದು ಸಂಸದರು ವಿಶ್ಲೇಷಿಸಿದರು. 

ಕೊರೊನಾ ಅತ್ಯಂತ ಏರುಮಟ್ಟದಲ್ಲಿದ್ದ ಸಂದರ್ಭದಲ್ಲಿ ಭಾರತದಲ್ಲಿ ಆಕ್ಸಿಜನ್ ಬಳಕೆಯ ಪ್ರಮಾಣ 10 ಪಟ್ಟು ಹೆಚ್ಚಾಗಿತ್ತು. ಈ ಬೇಡಿಕೆಯನ್ನು ನೆಲ, ಜಲ ಮತ್ತು ವಾಯುಮಾರ್ಗಗಳನ್ನು ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದು ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರ. ಪಿ.ಎಂ.ಕೇರ್ಸ್ ನಿಧಿಯಲ್ಲಿ ದೇಶಾದ್ಯಂತ 50 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲಾಗಿದೆ. 1.5 ಲಕ್ಷದಷ್ಟು ಆಕ್ಸಿಜನ್ ಸಿಲಿಂಡರ್ ಹಾಗೂ ಲಕ್ಷಾಂತರ ಆಕ್ಸಿಜನ್ ಕಾನ್ಸೆಂಟ್ರೇಟರ್‍ಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದೆ. ಕೋವಿಡ್‍ನಿಂದ ಅನಾಥರಾದ ಮಕ್ಕಳಿಗೆ ಪ್ರತಿ ತಿಂಗಳು ಸ್ಟೈಪಂಡ್ ಹಾಗೂ ವಿಮೆಯನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು.  

 ದೇಶಾದ್ಯಂತ 2084 ಕೊರೊನಾ ಆಸ್ಪತ್ರೆಗಳು, 4000 ಕ್ಕೂ ಹೆಚ್ಚು ಕೊರೋನಾ ಹೆಲ್ತ್ ಕೇರ್ ಸೆಂಟರ್‍, 1 ಲಕ್ಷಕ್ಕೂ ಹೆಚ್ಚು ಐ.ಸಿ.ಯು ಬೆಡ್‍, 16 ಲಕ್ಷಕ್ಕೂ ಹೆಚ್ಚು ಐಸೋಲೇಷನ್ ಬೆಡ್‍ಗಳನ್ನು ಕೊರೊನಾ ಸಂದರ್ಭದಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ದಿನ 20 ಲಕ್ಷಕ್ಕೂ ಹೆಚ್ಚು ಕೊರೊನಾ ಟೆಸ್ಟ್‍ಗಳನ್ನು ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಇಂದು ಆಕ್ಸಿಜನ್ ಜನರೇಟರ್‍ಗಳನ್ನು ಹೊಂದಿವೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಏಳೆಂಟು ವೆಂಟಿಲೇಟರ್‍ಗಳು ಆಕ್ಸಿಜನ್ ಬೆಡ್‍ಗಳು ಲಭ್ಯವಾಗಿವೆ.  ದಾವಣಗೆರೆಯ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 3000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಜನರೇಟರ್‍ಗಳು ದೊರಕಿವೆ. ಈ ಹಿಂದೆ ದಶಕಗಳೇ ಉರುಳಿದರೂ ಕೆಲವೊಂದು ಸಾಂಕ್ರಾಮಿಕ ರೋಗಳಿಗೆ ವ್ಯಾಕ್ಸಿನ್ ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಕೇವಲ 8 ತಿಂಗಳಲ್ಲಿ ದೇಶೀಯ ವ್ಯಾಕ್ಸಿನ್‍ಗಳನ್ನು ತಯಾರಿಸಿ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದೆ. ಡಿಸೆಂಬರ್ ಹೊತ್ತಿಗೆ ದೇಶದ ಶೇಕಡ 80 ರಷ್ಟು ಜನ ಲಸಿಕೆಗೆ ಒಳಪಡಲಿದ್ದಾರೆ ಎಂದು ಹೇಳಿದರು.

2020-21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 93 ಸಾವಿರ ಕೋಟಿಯನ್ನು ಆಯವ್ಯಯದಲ್ಲಿ ಮೀಸಲಿಟ್ಟಿತ್ತು, ಇದನ್ನು 2021-22 ನೇ ಸಾಲಿಗೆ 2.34 ಲಕ್ಷ ಕೋಟಿಗೆ ಏರಿಸಿದ್ದು ಸರ್ಕಾರದ ದೂರದೃಷ್ಟಿ ಎಂದು ಸಿದ್ದೇಶ್ವರ ಅವರು ವಿವರಿಸಿದರು.  

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೈವಜ್ಞ ಸಮಾಜದ ಅಧ್ಯಕ್ಷ ಸತ್ಯನಾರಾಯಣ ಆರ್. ರಾಯ್ಕರ್, ಎ.ಜಿ.ವಿಠ್ಠಲ್, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್ ಹಾಗೂ ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!