ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಅಂಗಡಿಗಳಿಗೆ ಡಿಸಿ ಅನುಮತಿ
ವಾರಾಂತ್ಯದ ಕರ್ಫ್ಯೂ ಹಿನ್ನೆಲೆ: ಸೋಮವಾರದಿಂದ ಆದೇಶ ಅನ್ವಯ
ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಬೆಳಿಗ್ಗೆ 6 ರಿಂದ 2ರವರೆಗೆ ಅವಕಾಶ
ದಾವಣಗೆರೆ, ಜೂ. 25 – ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ದಾವಣಗೆರೆಯನ್ನು `ಎ’ ವರ್ಗಕ್ಕೆ ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಅಂಗಡಿಗಳು ಹಾಗೂ ಹೋಟೆಲ್ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ವಿನಾಯಿತಿ ನೀಡಲಾಗಿದೆ.
ಚಾಮರಾಜನಗರ, ದಾವಣಗೆರೆ ಹಾಗೂ ಚಿಕ್ಕಮಗಳೂರುಗಳನ್ನು ಒಂದನೇ ವರ್ಗಕ್ಕೆ ಸೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರನ್ನು ಎರಡನೇ ವರ್ಗಕ್ಕೆ ಸೇರಿಸಲಾಗಿದೆ.
ಒಂದನೇ ವರ್ಗಕ್ಕೆ ಸೇರಿದ ಹಿನ್ನೆಲೆಯಲ್ಲಿ ಆದೇಶವೊಂದನ್ನು ಹೊರಡಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಲ್ಲ ಅಂಗಡಿಗಳು ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ವಹಿವಾಟು ನಡೆಸಬಹುದು ಎಂದು ತಿಳಿಸಿದ್ದಾರೆ. ಆದರೆ, ಹವಾನಿಯಂತ್ರಿತ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ಗಳಿಗೆ ಅನುಮತಿ ದೊರೆತಿಲ್ಲ.
ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಬಾರ್ ಹಾಗೂ ಕ್ಲಬ್ಗಳು ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಶೇ.50ರ ಸಾಮರ್ಥ್ಯದಲ್ಲಿ ಗ್ರಾಹಕರಿಗೆ ಸ್ಥಳದಲ್ಲೇ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಆದರೆ, ಊಟದ ಜೊತೆಗೆ ಮದ್ಯವನ್ನು ಪೂರೈಸುವಂತಿಲ್ಲ. ಹವಾನಿಯಂತ್ರಿತ ಹೋಟೆಲ್ ಇತ್ಯಾದಿಗಳು ಕಾರ್ಯ ನಿರ್ವಹಿಸುವಂತಿಲ್ಲ.
ಲಾಡ್ಜ್, ರೆಸಾರ್ಟ್ ಇತ್ಯಾದಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.
ಪಾರ್ಕ್ಗಳು ಬೆಳಿಗ್ಗೆ 5ರಿಂದ ಸಂಜೆ 6ರವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತವೆ. ಆದರೆ, ಇಲ್ಲಿ ಯಾವುದೇ ಗುಂಪು ಚಟುವಟಿಕೆಗಳನ್ನು ನಡೆಸುವಂತಿಲ್ಲ. ಹವಾನಿಯಂತ್ರಣ ರಹಿತವಾದ ಜಿಮ್ಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಪ್ರೇಕ್ಷಕರ ರಹಿತವಾಗಿ ಎಲ್ಲಾ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ತಿಳಿಸಿದ್ದಾರೆ.
ಜುಲೈ 5ರವರೆಗೆ ಅನ್ವಯವಾಗುವಂತೆ ಈ ವಿನಾಯಿತಿಗಳನ್ನು ಪ್ರಕಟಿಸಲಾಗಿದೆ. ಪ್ರಸಕ್ತ ಶನಿವಾರ ಹಾಗೂ ಭಾನುವಾರದಂದು ವಾರಾಂತ್ಯದ ಕರ್ಫ್ಯೂ ಇದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ವಿನಾಯಿತಿಗಳು ದೊರೆಯಲಿವೆ.
ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲು, ಹಾಲಿನ ಬೂತ್ಗಳು ಮತ್ತು ಜಾನುವಾರು ಮೇವಿನ ಅಂಗಡಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯ ನಿರ್ವಹಿಸಬಹುದು. ಮದ್ಯದ ಅಂಗಡಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಪಾರ್ಸೆಲ್ ನೀಡಬಹುದು.
ತುರ್ತು ಹಾಗೂ ಅಗತ್ಯ ಸೇವೆಗಳಿಗೆ ಹಿಂದಿನಂತೆಯೇ ಅನುಮತಿ ಇದೆ. ಬಸ್, ರೈಲು ಹಾಗೂ ವಿಮಾನಯಾನಗಳಿಗೆ ಅನುಮತಿ ಇದೆ. ನಿಗದಿಯಾದ ಮದುವೆಗಳು ಹಾಗೂ ಅಂತ್ಯಕ್ರಿಯೆಗಳಿಗೆ ನಿರ್ಬಂಧಿತ ಅನುಮತಿ ಇದೆ.