ಎಲ್ಲಮ್ಮ ಬಡಾವಣೆಯ ಅಭಿವೃದ್ಧಿಗೆ 30 ಲಕ್ಷ ಹಣ ತೆಗೆದಿರಿಸಲು ಆಯುಕ್ತರಿಗೆ ಶಾಸಕರ ನಿರ್ದೇಶನ

ಹರಿಹರ, ಜೂ.24- ನಗರದ ಎಲ್ಲಮ್ಮ ಬಡಾವಣೆಯ ಅಭಿವೃದ್ಧಿಗೆ ನಗರಸಭೆ ವತಿಯಿಂದ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 30 ಲಕ್ಷ ರೂ. ಹಣವನ್ನು ತೆಗೆದಿರಿಸಲು ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಅವರಿಗೆ ಶಾಸಕ ಎಸ್.ರಾಮಪ್ಪ ಅವರು ನಿರ್ದೇಶಿಸಿದ್ದಾರೆ.

ಶಾಸಕ ಎಸ್.ರಾಮಪ್ಪ ನಗರದಲ್ಲಿನ ಎಲ್ಲಮ್ಮ ಬಡಾವಣೆಯ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಿ ನಂತರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಎಲ್ಲಮ್ಮ ಬಡಾವಣೆಯಲ್ಲಿ 100 ಕ್ಕೂ ಹೆಚ್ಚು ಮನೆಗಳು ಇದ್ದು, ಸುಮಾರು 400 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ,   ನಗರಸಭೆಯಿಂದಾಗಲೀ ಅಥವಾ ಗುತ್ತೂರು ಗ್ರಾಮ ಪಂಚಾಯತಿ ವತಿಯಿಂ ದಾಗಲೀ  ಮೂಲಭೂತ  ಸೌಕರ್ಯಗಳನ್ನು ಒದಗಿಸದೇ ಇರುವುದರಿಂದ ಜನರ ಬದುಕು ದುಸ್ತರವಾಗಿರುವ ಬಗ್ಗೆ ಶಾಸಕರು ಆಯುಕ್ತರಿಗೆ ವಿವರಿಸಿದರು.

ಪೌರಾಯುಕ್ತರಾದ ಲಕ್ಷ್ಮೀ ಮಾತನಾಡಿ,  ನಗರಸಭೆ ವ್ಯಾಪ್ತಿಗೆ ಈ ಬಡಾವಣೆಯನ್ನು ಸೇರ್ಪಡೆ ಮಾಡಲಾಗಿದೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಮಗೆ ಯಾವುದೇ ರೀತಿಯ ಆದೇಶ ಸರ್ಕಾರದಿಂದ ಬರದೇ ಇರುವುದರಿಂದ ಇಲ್ಲಿನ ಜನತೆಗೆ ನಗರಸಭೆ ವತಿಯಿಂದ ಹಣವನ್ನು ಬಳಕೆ ಮಾಡುವುದಕ್ಕೆ ಬರುವುದಿಲ್ಲ. ಗುತ್ತೂರು ಗ್ರಾಮ ಪಂಚಾಯತಿ ವತಿ ಯಿಂದ ಮಾತ್ರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಧಿಕಾರ ಇದೆ. ಆದರೆ, ನಗರಸಭೆಯಿಂದ ಈ ಭಾಗದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

ಸ್ಥಳೀಯ ನಿವಾಸಿ, ನಿವೃತ್ತ ಸೈನಿಕ ಮಂಜುನಾಥ್ ಮಾತನಾಡಿ, ಶುದ್ಧವಾದ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಪೂರೈಕೆ ಸೇರಿದಂತೆ, ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸದಿರುವ ಬಗ್ಗೆ ಕಿಡಿ ಕಾರಿದರು.

ಸ್ಥಳೀಯ ನಿವಾಸಿಗಳು ಮಾತನಾಡಿ, ನಮ್ಮ ಬಡಾವಣೆಯಲ್ಲಿ ಬೋರ್ ವೆಲ್ ಮೂಲಕ ನೀರನ್ನು ಪ್ರತಿದಿನ ಅರ್ಧ ಗಂಟೆ ಮಾತ್ರ ಬಿಡುತ್ತಾರೆ. ಆದರೆ ಸೀಮೆಎಣ್ಣಿ ಮಿಕ್ಸ್ ನೀರು ಬರುತ್ತಿದೆ ಎಂದು ದೂರಿದರು.

ಗುತ್ತೂರು ಪಿಡಿಒ ವಿಜಯಲಕ್ಷ್ಮಿ ಅವರಿಗೆ ಸ್ಥಳಕ್ಕೆ ಆಗಮಿಸುವಂತೆ ಶಾಸಕರು ಸೂಚಿಸಿದರೂ ವಿಜಯಲಕ್ಷ್ಮಿ ಸ್ಥಳಕ್ಕೆ ಆಗಮಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಎಇಇ ಬಿರಾದಾರ್‌, ಗುತ್ತೂರು ವಿ.ಎ. ಪ್ರಭು, ನಾಗರಾಜಪ್ಪ ಸ್ಥಳೀಯ ನಿವಾಸಿಗಳು ಹಾಜರಿದ್ದರು.

error: Content is protected !!