ದಾವಣಗೆರೆ, ಜೂ.23- ಒಂದೆರಡು ದಿನ ಗಳಲ್ಲಿ ಜಿಲ್ಲೆಯನ್ನು ಸಂಪೂರ್ಣ ಅನ್ಲಾಕ್ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಸಹಮತ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು, ಜಿಲ್ಲೆಯಲ್ಲಿ ಶೇ.1ರಷ್ಟು ಮಾತ್ರ ಪಾಸಿಟಿವಿಟಿ ದರ ಹೆಚ್ಚಾಗಿದೆ. ಈ ಕಾರಣದಿಂದ ಜಿಲ್ಲೆಯ ವರ್ತಕರಿಗೆ ಅನ್ಯಾಯವಾಗಬಾರದು. ಈ ಮೊದಲು 17 ಜಿಲ್ಲೆಗಳಿಗೆ ಯಾವ ರೀತಿ ಸಂಪೂರ್ಣ ಅನ್ಲಾಕ್ ಘೋಷಣೆ ಮಾಡಿದ್ದೀರೋ ಅದೇ ರೀತಿ ದಾವಣಗೆರೆ ಜಿಲ್ಲೆಯನ್ನೂ ಸಹ ಸಂಪೂರ್ಣ ಅನ್ಲಾಕ್ ಮಾಡಿ ಎಂದು ಮನವಿ ಮಾಡಿದ್ದಾರೆ. ಸಂಸದರ ಮನವಿ ಮೇರೆಗೆ ಒಂದೆರಡು ದಿನಗಳಲ್ಲಿ ದಾವಣಗೆರೆ ಜಿಲ್ಲೆಯನ್ನೂ ಸಹ ಸಂಪೂರ್ಣ ಅನ್ಲಾಕ್ ಮಾಡುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ಸಂಸದರಿಗೆ ನೀಡಿದ್ದಾರೆ. ಆದ್ದರಿಂದ, ಜಿಲ್ಲೆಯ ವರ್ತಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಂಸದ ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆ ನಗರ ಹಾಗೂ ಜಿಲ್ಲೆಯ ವಿವಿಧ ನಗರಗಳ ವರ್ತಕರ ಒತ್ತಡದ ಕಾರಣದಿಂದಾಗಿ ನಿನ್ನೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ರವರಿಗೆ ದೂರವಾಣಿ ಮುಖಾಂತರ ಮಾತನಾಡಿ, ಎಲ್ಲಾ ವಹಿವಾಟುಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ ಪರಿಣಾಮವಾಗಿ ಇದಕ್ಕೆ ಒಪ್ಪಿಗೆ ನೀಡಿದ ಪ್ರಧಾನ ಕಾರ್ಯದರ್ಶಿಗಳು ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ಎಲ್ಲಾ ವಹಿವಾಟುಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅನುಮತಿ ನೀಡುವಂತೆ ಸೂಚನೆ ನೀಡಿದ್ದರು, ಅದರಂತೆ ಜಿಲ್ಲಾಧಿಕಾರಿಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಉಪಯೋಗಿಸದೇ ಎಲ್ಲಾ ವಹಿವಾಟುಗಳಿಗೆ ಅನುಮತಿ ನೀಡಿದ್ದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ತಜ್ಞರ ಸಲಹೆಯಂತೆ ಶೇ. 5ರ ಒಳಗಡೆ ಪಾಸಿಟಿವಿಟಿ ಇರುವ ಜಿಲ್ಲೆಗಳನ್ನು ಸಂಪೂರ್ಣವಾಗಿ ಅನ್ಲಾಕ್ ಮಾಡಲಾಗಿದೆ. ಆದರೆ ದಾವಣಗೆರೆ ಜಿಲ್ಲೆಯ ಪಾಸಿಟಿವಿಟಿ ದರ ಶೇಕಡ 6.3 ರಷ್ಟಿರುವ ಕಾರಣದಿಂದಾಗಿ ಜುಲೈ 5 ರವರೆಗೆ ಲಾಕ್ಡೌನ್ ಸ್ವಲ್ಪ ಸಡಿಲಿಕೆ ಮಾಡಿ ಅನುಮತಿ ನೀಡಲಾಗಿತ್ತು.