2ನೇ ಅಲೆ ನಿಯಂತ್ರಿಸುವಲ್ಲಿ ಮಠ ಮಾನ್ಯಗಳ ಅನನ್ಯ ಸೇವೆ

ದಾವಣಗೆರೆ, ಜೂ.23- ಕೋವಿಡ್‌ 2ನೇ ಅಲೆ ನಿಯಂತ್ರಿಸುವಲ್ಲಿ ಮತ್ತು ಕೊರೊನಾ ಸೋಂಕಿತರನ್ನು ಆರೈಕೆ ಮಾಡುವಲ್ಲಿ ನಾಡಿನ ಬಹುತೇಕ ಮಠ ಮಾನ್ಯಗಳ ಸೇವೆ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅಭಿಮಾನ ಪೂರ್ವಕವಾಗಿ ನುಡಿದರು.

ನಗರದ ಹೊರವಲಯದಲ್ಲಿರುವ ತರಳಬಾಳು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಭಜನೆ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಾದಿಕಾಲದಿಂದಲೂ ಮಠಗಳು ಶೈಕ್ಷಣಿಕ ಕ್ರಾಂತಿ, ಅನ್ನ ದಾಸೋಹದ ಮೂಲಕ ವಿಶಿಷ್ಟ ಸೇವೆ ಮಾಡುತ್ತಾ ಬಂದಿದ್ದು, ತಮ್ಮದೇ ಆದ ಶೈಲಿ, ಶಕ್ತಿ, ಭಕ್ತಿಯನ್ನು ಉಪಯೋಗಿಸಿಕೊಂಡು ಕೋವಿಡ್‌ ಸೋಂಕಿತರ ಆರೈಕೆ ಮಾಡಿ ಗುಣಪಡಿಸುವಲ್ಲಿ ತರಳಬಾಳು ಕೋವಿಡ್‌ ಕೇರ್‌ ಸೆಂಟರ್‌ ಮುಂಚೂಣಿಯಲ್ಲಿದೆ ಎಂದರು.

ನಮ್ಮ ಸಂಸ್ಕೃತಿ ಏನೆಂದರೆ ಸಮಾಜದಿಂದ ಗಳಿಸದ ಗಳಿಕೆಯನ್ನು ಸಮಾಜಕ್ಕಾಗಿ ಕೊಡುವಲ್ಲಿ ಇರುವಷ್ಟು ಖುಷಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಇದನ್ನು ನಮ್ಮ ಪೂರ್ವಿಕರು ಕಾಲ ಕಾಲಕ್ಕೆ ತೋರಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ಜಿಲ್ಲಾಡಳಿತದ ಮೇಲಿರುವ ಕಾರಣ, ಕೋವಿಡ್‌ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರೇರಣೆ ದೊರಕಿದಂತಾಗಿದೆ ಎಂದು ತಿಳಿಸಿದರು.

ಮೊದಲನೇ ಅಲೆಗಿಂತ ಎರಡನೇ ಅಲೆ ವೇಗವಾಗಿ ಹರಡಲು ಕಾರಣ ಕೊರೊನಾ ಸೋಂಕಿತರನ್ನು `ಹೋಮ್‌ ಐಸೋಲೇಷನ್‌’ನಲ್ಲಿ ಇರಲು ಬಿಟ್ಟಿದ್ದೇ ಕಾರಣವಾಯಿತು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಮಾತನಾಡಿ, ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿಯವರ ನೇತೃತ್ವದ ಅಧಿಕಾರಿಗಳ ತಂಡ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದೆ ಎಂದರು.

ಚಿಂತಕ ಮಹೇಶ್‌ ಚಟ್ನಳ್ಳಿ ಮಾತನಾಡಿ, ಸತ್ಕಾರ್ಯ ಮತ್ತು ಸತ್ಕರ್ಮಗಳೇ ನಿಜವಾದ ಸದ್ಧರ್ಮ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಯಲ್ಲಿನ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯದ ಸ್ವಹಿತ ಮೀರಿದ ಸೇವೆ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್‌ ಎಸ್‌.ಟಿ. ವೀರೇಶ್‌, ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್‌, ನೋಡಲ್‌ ಅಧಿಕಾರಿ ಡಾ. ನಟರಾಜ್‌, ತರಳಬಾಳು ಸೇವಾ ಸಮಿತಿ ಅಧ್ಯಕ್ಷ ಶಶಿಧರ ಹೆಮ್ಮನಬೇತೂರು, ಇತರೆ ಪದಾಧಿಕಾರಿಗಳಾದ ಮಾಗನೂರು ಉಮೇಶ್‌ ಗೌಡ್ರು, ಲಿಂಗರಾಜ್‌ ಅಗಸನಕಟ್ಟೆ, ಶ್ರೀನಿವಾಸ್‌ ಮೆಳ್ಳೇಕಟ್ಟೆ, ಪ್ರಭು ಕಾವಲಹಳ್ಳಿ, ಸತೀಶ್‌ ಸಿರಿಗೆರೆ, ಶಿವಕುಮಾರ್‌ ಕೊರಟಿಗೆರೆ, ಧನ್ಯಕುಮಾರ್‌ ಎಲೆಬೇತೂರು, ಕಕ್ಕರಗೊಳ್ಳದ ಕೆ.ಬಿ. ಪರಮೇಶ್ವರಪ್ಪ, ಡಾ. ಅಭಿಜಿತ್‌, ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ಸಿಪಿಐ ಗಜೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!