ದಾವಣಗೆರೆ, ಮಾ.23 – ಕೊರೊನಾ ನಿಯಮಾವಳಿಗಳ ಪಾಲನೆಯೊಂದಿಗೆ ಜಿಲ್ಲಾ ಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ವೇದಿಕೆ ಕಾರ್ಯಕ್ರಮವನ್ನು ಹಾಗೂ ಏಪ್ರಿಲ್ 5 ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಸರಳವಾಗಿ ಆಚರಿಸಲು ತೀರ್ಮಾನಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡುವ ಕುರಿತು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಂದು ಉಪನ್ಯಾಸ ಕಾರ್ಯಕ್ರಮ ಏರ್ಪ ಡಿಸಲಾಗುವುದು ಹಾಗೂ ಇಬ್ಬರು ಪ್ರೌಢಶಾಲಾ ಮಕ್ಕಳಿಂದ ಅಂಬೇಡ್ಕರ್ ಅವರ ಕುರಿತು ಭಾಷಣ ಏರ್ಪ ಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಅತಿ ಹೆಚ್ಚು ಅಂಕ ಪಡೆದ ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಲಾಗುವುದು ಹಾಗೂ ಪ್ರೌಢಶಾಲೆ, ಪಿಯು ಮತ್ತು ಪದವಿ-ಸ್ನಾತಕೋತ್ತರ ಪದವಿ ಮೂರೂ ವಿಭಾಗಗಳಲ್ಲಿ ಅಂಬೇಡ್ಕರ್ ಜೀವನ ಸಾಧನೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ತಿಳಿಸಿದರು..
ಅಂಬೇಡ್ಕರ್ ಭವನದ ಶಂಕುಸ್ಥಾಪನೆಗೆ ಕ್ರಮ: ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಮುಖಂಡರು ಆಗ್ರಹಿಸಿದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಭವನ ನಿರ್ಮಾಣಕ್ಕೆ 2.10 ಕೋಟಿ ರೂ. ಬಿಡುಗಡೆ ಆಗಿದ್ದು ಆಡಳಿತಾತ್ಮಕ ಅನುಮೋದನೆಗೆ ಕಡತ ಕಾರ್ಯದರ್ಶಿಗಳ ಕಚೇರಿಯಲ್ಲಿದೆ. ಅಂಬೇಡ್ಕರ್ ಜಯಂತಿಯೊಳಗೆ ಮಂಜೂರಾತಿ ಪಡೆಯುವ ಭರವಸೆ ವ್ಯಕ್ತಪಡಿಸಿದರು.
ಡಿಎಸ್‍ಎಸ್ ದಾವಣಗೆರೆ ಜಿಲ್ಲಾಧ್ಯಕ್ಷರಾದ ದುಗ್ಗಪ್ಪ ಮಾತನಾಡಿ, ಆವರಗೆರೆಯಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಡಿಎಸ್‍ಎಸ್ ತಾಲ್ಲೂಕು ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಹರಿಹರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು ಹಾಗೂ ಅಂಬೇಡ್ಕರ್ ಮತ್ತು ಪ್ರೊ. ಬಿ. ಕೃಷ್ಣಪ್ಪನವರ ಪುತ್ಥಳಿಗಳನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಎಸ್.ಶೇಖರಪ್ಪ ಮಾತನಾಡಿ ನಗರದ ಕೆಇಬಿ ವೃತ್ತದ ಅಂಬೇಡ್ಕರ್ ಪುತ್ಥಳಿ ಸಣ್ಣದಿದ್ದು, ಆಳೆತ್ತರದ ಪುತ್ಥಳಿ ಸ್ಥಾಪಿಸಬೇಕೆಂದು ಆಗ್ರಹಿಸಿದರೆ, ಸುಭಾಷ್‍ಚಂದ್ರ ಮಾತನಾಡಿ, ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುಂಚೆ ದಲಿತ ಕಾರ್ಮಿಕರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎನ್. ಬಾಲಾಜಿ ಮಾತನಾಡಿ, ಈ ವರ್ಷ ಅಂಬೇಡ್ಕರ್ ಜಯಂತಿಯನ್ನು `ದಲಿತರ ಬೇಡಿಕೆ’ಯ ದಿನವನ್ನಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.
ಡಿಎಸ್‍ಎಸ್ ರಾಜ್ಯ ಸಂಚಾಲಕ ಮಲ್ಲೇಶಪ್ಪ ಮಾತನಾಡಿ, ಹರಿಹರದಲ್ಲಿನ ಮೈತ್ರಿವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ಸಮುದಾಯ ಭವನವನ್ನು ಸರ್ಕಾರ ಟ್ರಸ್ಟ್‌ನಿಂದ ವಹಿಸಿಕೊಂಡು ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಆದಿಜಾಂಬವ ಸಂಘದ ಅಧ್ಯಕ್ಷರಾದ ಟಿ.ರಮೇಶ್ ಮಾತನಾಡಿ, ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಬೇಕು ಎಂದು ಹೇಳಿದರು.
ಮುಖಂಡರಾದ ಹೆಗ್ಗೆರೆ ರಂಗಪ್ಪ ಮಾತನಾಡಿ, ನಗರದ ಬಾಬು ಜಗಜೀವನರಾಂ ಭವನ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಭವನ ನಿರ್ವಹಿಸಲು ಉಸ್ತುವಾರಿ ಸಮಿತಿ ನೇಮಿಸಬೇಕೆಂದು ಒತ್ತಾಯಿಸಿದರು.
ಅನೀಸ್ ಪಾಷಾ ಮಾತನಾಡಿ, ಅಂಬೇಡ್ಕರ್ ಜಯಂತಿ ನಮಗೆ ಹಬ್ಬದ ರೀತಿಯಾಗಿದ್ದು, ನಾವು ಮಾಂಸಾಹಾರ ಮಾಡಿ ಸಂಭ್ರಮಿಸುವುದು ಇಷ್ಟ. ಆದರೆ ಅಂದು ಮಾಂಸ ನಿಷೇಧಿಸಲಾಗಿದೆ. ಈ ನಿಷೇಧ ಯಾವ ಕಾರಣಕ್ಕೆ ಎಂಬ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದರು.
ಸಿಪಿಐನ ಉಮೇಶ್, ಮುಖಂಡರಾದ ಮಂಜುನಾಥ್, ಹೆಚ್.ಹುಲಿಗೇಶ್, ಸೋಮ್ಲಾಪುರ ಹನುಮಂತಪ್ಪ, ಡಾ.ಬಾಬು ಜಗಜೀವನರಾಂ ರೀಸರ್ಚ್ ಸ್ಟಡಿ ಸೆಂಟರ್‌ನ ಛೇರ್ಮನ್ ಹೆಚ್.ವಿಶ್ವನಾಥ್ ಹಾಗೂ ಮುಖಂಡರಾದ ಮಲ್ಲಿಕಾರ್ಜುನ್, ಐರಣಿ ಚಂದ್ರು, ತಿಪ್ಪೇಸ್ವಾಮಿ ಮತ್ತಿತರೆ ಮುಖಂಡರು ಮಾತನಾಡಿದರು