ಹರಿಹರ, ಜೂ.20- ರಾಜ್ಯದ ಲಿಂಗಾಯತ ಸಮಾಜದ ನಾಯಕರಲ್ಲಿ ನಾಯಕತ್ವದ ಗುಣಗಳು ರಕ್ತಗತವಾಗಿ ಬಂದಿವೆ. ಒಂದು ವೇಳೆ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಮಾಡುವುದಕ್ಕೆ ಮುಂದಾದರೆ, ಉತ್ತರ ಕರ್ನಾ ಟಕ ಭಾಗದ ಲಿಂಗಾಯತ ನಾಯಕರಿಗೆ ಈ ಸ್ಥಾನವನ್ನು ನೀಡಬೇಕೆಂದು ಬಿಜೆಪಿ ಮುಖಂಡ ರಿಗೆ ಸಲಹೆ ನೀಡುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ತರಳಬಾಳು ಸೇವಾ ಸಮಿತಿ, ತಾಲ್ಲೂಕು ಸಾಧು ವೀರಶೈವ ಸಮಾಜ, ತರಳಬಾಳು ಯುವಕ ಹಾಗೂ ಮಹಿಳಾ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಮತ್ತು ಪರಿಚಾರಕರಿಗೆ ಮಧ್ಯಾಹ್ನ ಉಚಿತವಾಗಿ ನೀಡುವ ಆಹಾರ ಕಿಟ್ ವಿತರಣೆ ಮಾಡಿ ಶ್ರೀಗಳು ಮಾತನಾಡಿದರು.
ಒಂದು ವೇಳೆ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಮಾಡುವುದಕ್ಕೆ ಮುಂದಾದರೆ, ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರಿಗೆ ಈ ಸ್ಥಾನವನ್ನು ನೀಡಬೇಕು. ಇದು, ನಮ್ಮ ಸಲಹೆಯೇ ವಿನಃ ಹೀಗೇ ಮಾಡಿ ಎಂದು ಹೇಳುವ ಸ್ವಾಮಿಗಳು ನಾವಲ್ಲ. ನಾವು ಹೇಳಿದ್ದನ್ನು ಮಾಡದಿದ್ದರೆ ಕಷ್ಟವಾಗಲಿದೆ ಎಂದು ಹೇಳುವ ಸ್ವಾಮಿಗಳಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಯಾವ ವ್ಯಕ್ತಿ ಇರುತ್ತಾರೆಯೋ ಅವರು ರಾಜ್ಯದ ಸಿ.ಎಂ. ಸ್ಥಾನ ಅಲಂಕರಿಸುತ್ತಾರೆ. ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದಾಗ ಬಿಜೆಪಿ ರಾಜ್ಯದ ಉಸ್ತುವಾರಿ ಆರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದಿಂದ ಲಿಂಗಾಯತ ಎಲ್ಲಾ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
-ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಜಗದ್ಗುರು, ಪಂಚಮಸಾಲಿ ಪೀಠ, ಕೂಡಲ ಸಂಗಮ.
ರಾಜ್ಯದಲ್ಲಿ ಹಿಂದೆ ಲಿಂಗಾಯತ ಸಮಾಜದ ನಾಯಕರಾದ ಎಸ್. ನಿಜಲಿಂಗಪ್ಪ, ಎಸ್.ಆರ್. ಕಂಠಿ, ಬಿ.ಡಿ. ಜತ್ತಿ, ಎಸ್.ಆರ್. ಬೊಮ್ಮಯಿ, ವೀರೇಂದ್ರ ಪಾಟೀಲ್, ಜೆ.ಹೆಚ್. ಪಟೇಲ್, ಜಗದೀಶ್ ಶೆಟ್ಟರ್, ಈಗ ಆಡಳಿತ ನಡೆಸುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರುಗಳು ಆಡಳಿತವನ್ನು ಉತ್ತಮ ರೀತಿಯಲ್ಲಿ ಮಾಡಿರುವುದರಿಂದ ಮತ್ತು ಲಿಂಗಾಯತ ಧರ್ಮದ ನಾಯಕರಿಗೆ ರಕ್ತದಲ್ಲಿಯೇ ನಾಯಕ ತ್ವದ ಗುಣಗಳು ಇದ್ದು, ಲಿಂಗಾಯತ ಸಮಾಜದ ವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಅದ ರಲ್ಲೂ ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರಿಗೆ ಸಿಎಂ ಸ್ಥಾನ ನೀಡಿದರೆ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಡಾ. ಚಂದ್ರಮೋಹನ್, ರೈತ ಮುಖಂಡ ಲೋಕಿಕೆರೆ ನಾಗರಾಜ್, ಶಿವಕುಮಾರ್ ಕೊಂಡಜ್ಜಿ, ಬೆಳ್ಳೂಡಿ ರಾಮಚಂದ್ರಪ್ಪ, ಹನಗವಾಡಿ ಮಂಜುನಾಥ್, ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ಕೋಡಿಹಳ್ಳಿ ನಾಗರಾಜ್, ಕಿರಣ್ ಮೂಲಿಮನಿ, ವಕೀಲ ಉಮೇಶ್, ವಸಂತ್, ಭಾರತ್, ವೀರಣ್ಣ ಕೊಂಡಜ್ಜಿ, ದಾವಣಗೆರೆ ವಿಶ್ವನಾಥ್ ಇನ್ನಿತರರು ಹಾಜರಿದ್ದರು.