ಕೊರೊನಾ ಓಡಿಸಲು ಯೋಗ ಅತ್ಯವಶ್ಯ: ಮೇಯರ್
ದಾವಣಗೆರೆ, ಜೂ.20- 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಆರೋಗ್ಯಕ್ಕೆ ಯೋಗ ಕಾರ್ಯಕ್ರಮವನ್ನು ನಗರದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇಂದು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆಯ ಮೇಯರ್ ಎಸ್.ಟಿ. ವೀರೇಶ್, ಆರೋಗ್ಯಕ್ಕೆ ಸಂಬಂಧಿಸಿದ ಯೋಗ ಪದ್ಧತಿಯನ್ನು ನಮ್ಮ ಪೂರ್ವ ಜರು ಪರಿಚಯಿಸಿದ್ದರೂ ಈವರೆಗೂ ನಾವು ಯಾರೂ ಪಾಲನೆ ಮಾಡುತ್ತಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಣೆಗೆ ತರುವುದರ ಮೂಲಕ ಯೋಗದಿಂದ ಆರೋಗ್ಯವನ್ನು ಹೇಗೆ ಸಂಪಾದಿಸ ಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಕೊರೊನಾ ಹೋಗಲಾಡಿಸಲು ಯೋಗ ಅತ್ಯವಶ್ಯವಾಗಿದ್ದು, ಯೋಗ ತರಬೇತಿಯಿಂದ ಅಭ್ಯಾಸ ಮಾಡಿ, ಮನೆಗೆ ತೆರಳಿದ ನಂತರವೂ ನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.
ವೈದ್ಯಾಧಿಕಾರಿ ಡಾ|| ನಾಗರಾಜ್, ವಾಸುದೇವ ರಾಯ್ಕರ್ ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ವರದಿಗಾರರ ಕೂಟ ಹಾಗೂ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಾಗಿತ್ತು.