ದಾವಣಗೆರೆ, ಮಾ.22- ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಚನ್ನಗಿರಿ ನಗರ ಮತ್ತು ನಲ್ಲೂರಿನ ಬಳಿ ಇರುವ ಅಂಗಡಿ, ಪಾನ್‍ಶಾಪ್, ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆ, ಪಟ್ಟಣ ಪಂಚಾಯ್ತಿ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರ ಮಲ್ಲಪ್ಪ ಇವರ ನೇತೃತ್ವದಲ್ಲಿ ತಂಡ ರಚಿಸಿ ಕೊಂಡು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಡಿ 21, ಸೆಕ್ಷನ್ 6ಎ ಅಡಿಯಲ್ಲಿ 04, ಸೆಕ್ಷನ್ 6ಬಿ ರಡಿ 02 ಸೇರಿದಂತೆ ಒಟ್ಟು 27 ಪ್ರಕರ ಣಗಳನ್ನು ದಾಖಲಿಸಿ, ರೂ.2700/- ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಯಿತು.
ಕೋಟ್ಪಾ ಕಾಯಿದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದರ ಬಗ್ಗೆ ಹಾಗೂ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಿರುವುದು, ಸೆಕ್ಷನ್ 4 ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಮತ್ತು ತಂಬಾಕು ಉತ್ಪನ್ನಗಳ ಪ್ಯಾಕ್‍ಗಳ ಮೇಲೆ ಎಚ್ಚರಿಕೆ ಚಿಹ್ನೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧ ಇರುವ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.
ಚನ್ನಗಿರಿಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಟಿ.ಎಂ ಪ್ರಭು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ, ಹಿರಿಯ ಆರೋಗ್ಯ ಸಹಾಯಕ ಅಶೋಕ ಎಂ, ಶಿಕ್ಷಣ ಇಲಾಖೆಯ ಟಿ.ಪಿ.ಇ.ಐ ಶ್ರೀಶೈಲಪ್ಪ, ಚನ್ನಗಿರಿಯ ಪೊಲೀಸ್ ಇಲಾಖೆಯ ಎಎಸ್‍ಐ ಜಯಪ್ಪ ಮತ್ತು ಸಂತೋಷ್, ಸಹಾಯಕ ಕೃಷ್ಣ ಇತರರು ಹಾಜರಿದ್ದರು.