ದಾವಣಗೆರೆಯಲ್ಲಿ ವೈದ್ಯರ ಪ್ರತಿಭಟನೆ

`ರಕ್ಷಿಸುವವರನ್ನು ರಕ್ಷಿಸಿ’ ಎಂದು ಪ್ರತಿಭಟಿಸಿದ ವೈದ್ಯರು

ದಾವಣಗೆರೆ, ಜು.18- ದಿನೇ ದಿನೇ ನಡೆಯುತ್ತಿರುವ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ವೈದ್ಯರ ಮೇಲಿನ  ದೌರ್ಜನ್ಯವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ದಾವಣಗೆರೆ ಶಾಲೆಯ ಎಲ್ಲಾ ಸದಸ್ಯರು  `ರಕ್ಷಕರನ್ನು ರಕ್ಷಿಸಿ’ ಎಂಬ  ಘೋಷವಾಕ್ಯ ದೊಂದಿಗೆ ಪ್ರತಿಭಟನಾ ದಿನವಾಗಿ ಜೂನ್ 18 ರಂದು ಆಚರಿಸಿದರು.

ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿ ಭಟಿಸುವ ಮೂಲಕ ತಮ್ಮ ಚಿಕಿತ್ಸಾ ಕಾರ್ಯ ವನ್ನು ನಿರ್ವಹಿಸುವುದರೊಂದಿಗೆ ವೈದ್ಯರು ತಮ್ಮ ವೃತ್ತಿಪರತೆಯನ್ನು ಎತ್ತಿ ಹಿಡಿದರು.

ಐಎಂಎ ದಾವಣಗೆರೆ ಶಾಖೆಯ ಅಧ್ಯಕ್ಷ  ಡಾ.ಎಸ್.ಎನ್.ಸೋಮಶೇಖರ್ ವೈದ್ಯರ ಮೇಲಿನ ಹಲ್ಲೆಯನ್ನು ಅಮಾನವೀಯವೆಂದು ಖಂಡಿಸಿದರು. 

ವೈದ್ಯಕೀಯ ಸಮುದಾಯವು ತಮ್ಮ ಜೀವದ ಹಂಗು ತೊರೆದು,  ದೇಶವನ್ನೆಲ್ಲಾ ಆವರಿಸಿರುವ ಕೋವಿಡ್ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಹೋರಾ ಡುತ್ತಿದೆ. ಈ ರೋಗಕ್ಕೆ ತುತ್ತಾದ  ಲಕ್ಷಾಂತರ ಜನರನ್ನು ಚಿಕಿತ್ಸೆಯಿಂದ ರಕ್ಷಿಸಿದ್ದಾರೆ. ಈ ಹೋರಾಟದಲ್ಲಿ 1400ಕ್ಕೂ ಹೆಚ್ಚು ಅನುಭವಿ ಹಿರಿಯ ಮತ್ತು ಕ್ರಿಯಾತ್ಮಕ ಕಿರಿಯ ವೈದ್ಯರು ತಾವೇ ಸ್ವತಃ ಸೋಂಕಿತರಾಗಿ ಹುತಾತ್ಮರಾಗಿದ್ದಾರೆ. ಇದು ಅವರ ಕುಟುಂಬವನ್ನು ಅನಾಥರಾಗಿಸಿರುವುದಲ್ಲದೆ  ಸಮಾಜಕ್ಕೂ ತುಂಬಲಾರದ ನಷ್ಟವನ್ನುಂಟು  ಮಾಡಿದೆ ಎಂದರು.

ಈ ಮಧ್ಯದಲ್ಲಿ ಸೇವೆನಿರತ ವೈದ್ಯರ ಮೇಲೆ ರೋಗಿಯ ಸಂಬಂಧಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ನಡೆಸುತ್ತಿದ್ದಾರೆ. ಇದು ವೈದ್ಯರುಗಳ ಸೇವಾ ಮನೋಭಾವದ ಉತ್ಸಾಹವನ್ನು ಕುಗ್ಗಿಸುತ್ತದೆ.

ಕರ್ತವ್ಯನಿರತ ವೈದ್ಯರಿಗೆ ರಕ್ಷಣೆ ಕೊಡಬೇಕು ಮತ್ತು ದುಷ್ಕೃತ್ಯ ಎಸಗಿದ ರೋಗಿಯ ಸಂಬಂಧಿಕರನ್ನು ಶೀಘ್ರವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮೃತರಾದ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಘೋಷಿಸಬೇಕು. ಸರ್ಕಾರ ಈಗಾಗಲೇ ಘೋಷಿಸಿರುವಂತೆ ಹುತಾತ್ಮರಾದ ವೈದ್ಯ ಕುಟುಂಬದವರಿಗೆ ಪರಿಹಾರ ಧನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು. 

ಈ ಸಮಯದಲ್ಲಿ ಐಎಂಎ ಅಧ್ಯಕ್ಷರಾದ ಡಾ.ಎಸ್.ಎನ್.ಸೋಮಶೇಖರ್, ಕಾರ್ಯದರ್ಶಿ ಡಾ. ಚಂದನ್, ಡಾ.ರವಿ, ಡಾ.ಜಿ.ಸಿ.ಬಸವರಾಜ್, ಡಾ.ರಮೇಶ್ , ಡಾ.ಅನಿತಾ ರವಿ, ಡಾ.ಡಿ.ಬಿ. ಪ್ರಕಾಶ್, ಡಾ.ಕೆ.ಮಹೇಶ್, ಡಾ.ರವಿ ಗೌಡ, ಡಾ.ಸಂತೋಷ್, ಡಾ.ಶಬ್ಬೀರ್, ಡಾ.ಅನೂಪ್ ಕುಮಾರ್, ಡಾ.ಶೋಭಾ ಧನಂಜಯ, ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

error: Content is protected !!