ಜೇನುಗೂಡು ಮಹಿಳಾ ಸಮಾಜದಿಂದ ಮಹಿಳಾ ದಿನಾಚರಣೆ
ದಾವಣಗೆರೆ, ಮಾ.22- ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ-ಸಂತೋಷ ಪಡಬೇಕು. ಹೆಣ್ಣು ಇರುವ ಮನೆ ನಂದಾದೀಪ. ಹೆಣ್ಣು ಹೆಣ್ಣಿಗೆ ಶತ್ರುವಲ್ಲ ಎಂದು ವೈದ್ಯರೂ, ಸಾಹಿತಿಗಳಾದ ಡಾ. ಶಶಿಕಲಾ ಕೃಷ್ಣಮೂರ್ತಿ ತಿಳಿಸಿದರು.
ಅವರು ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ `ಜೇನುಗೂಡು’ ಮಹಿಳಾ ಸಮಾಜದವರು ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಿದ್ದರು.
ಮಹಿಳೆಗೆ ಪ್ರೋತ್ಸಾಹ ಸಿಕ್ಕಾಗ, ಅವರ ಪ್ರತಿಭೆ ಹೊರಹೊಮ್ಮುತ್ತದೆ. ಜೇನು ಎಷ್ಟು ಸಿಹಿಯೋ, ಕಚ್ಚಿದರೆ ಅಷ್ಟೇ ಅಪಾಯ. ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತು ಜನಜನಿತವಾಗಿದೆ ಎಂದು ಹೇಳಿದರು.
ಮಗುವನ್ನು ಗರ್ಭದಲ್ಲಿ ಹೊತ್ತು, ಹೆತ್ತಾಗ ಹೆಣ್ಣು ಮರು ಜನ್ಮ ಪಡೆಯುತ್ತಾಳೆ. ಹೆಣ್ಣು ಎಂಬ ಕೀಳರಿಮೆ ಎಂದೂ ಬೇಡ. ಗೃಹ ಮತ್ತು ಗೃಹಿಣಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ವಿಶ್ಲೇಷಿಸಿದರು.
ಗಂಡು ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಪ್ರತಿಯೊಬ್ಬ ಹೆಣ್ಣಿನ ಜವಾಬ್ದಾರಿಯಾಗಿದೆ. ಆಗ ಪ್ರತಿಯೊಬ್ಬ ಗಂಡು ಮಕ್ಕಳೂ ಹೆಣ್ಣನ್ನು ಅಕ್ಕ, ತಂಗಿ ಎಂಬ ಭಾವನೆಯಿಂದ ಕಾಣುತ್ತಾರೆ ಎಂದರು.
ಕೋವಿಡ್ ಎರಡನೆಯ ಅಲೆ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು. ವೈದ್ಯರು ಹೇಳುವ ರೀತಿಯಲ್ಲಿ ನಡೆದುಕೊಳ್ಳಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹಿರಿಯರು ಲಸಿಕೆಯನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಹಿಳಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಹೆಚ್.ಮಾಳಮ್ಮ, ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ಸಂಗೀತ ಶಿಕ್ಷಕರಾದ ಶ್ರೀಮತಿ ರಜನಿ ರಘುನಾಥ್ ಕುಲಕರ್ಣಿ ಇವರುಗಳು ಆಗಮಿಸಿ, ಜೇನುಗೂಡು ಮಹಿಳಾ ಸಮಾಜದ ಕಾರ್ಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇನು ಗೂಡು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಜಾತ ನಾಗೇಶ್ ವಹಿಸಿದ್ದರು.
ಲಕ್ಷ್ಮಿ ಪ್ರಾರ್ಥಿಸಿದರು. ಸೌಭಾಗ್ಯ ಗಿರೀಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿಜಯ ವೀರೇಂದ್ರ ನಿರೂಪಿಸಿದರು. ವೀಣಾ ವಂದಿಸಿದರು. ವೇದಿಕೆಯಲ್ಲಿ ಮಹಿಳಾ ಸಮಾಜದ ಕಾರ್ಯದರ್ಶಿ ಮಧು ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ಭಕ್ತಿಗೀತೆ, ಭಾವಗೀತೆ, ವೇಷ ಭೂಷಣ ಸ್ಪರ್ಧೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.