ದಾವಣಗೆರೆ ವಿವಿಯ ವಿಶೇಷ ಉಪನ್ಯಾಸ ಕಾರ್ಯಕ್ರಮ
ದಾವಣಗೆರೆ, ಮಾ.21- ಯಾವುದೇ ಸಾಧಕರನ್ನು ಅನುಕರಣೆ ಮಾಡಬಾರದು. ಅವರ ಸಾಧನೆಯ ಪ್ರೇರಣೆಯಿಂದ ನಿಮ್ಮದೇ ಶೈಲಿಯಲ್ಲಿ, ನಿಮ್ಮದೇ ಯೋಜನೆ ಮತ್ತು ಯೋಚನೆಯಿಂದ ಕಾರ್ಯ ರೂಪಿಸಿಕೊಂಡು ಮುನ್ನಡೆಯಬೇಕು ಎಂದು ಉದ್ಯಮಿ ಹಾಗೂ ವಿಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಧನೆ-ಪ್ರೇರಣೆ ಕುರಿತು ಸಾಧಕರೊಂದಿಗೆ ಮಾತುಕತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಷ್ಟ, ಸಮಸ್ಯೆ, ಸವಾಲುಗಳು ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ. ಅವುಗಳನ್ನು ಮೆಟ್ಟಿ ಮುನ್ನಡೆಯುವ ವಿಭಿನ್ನ ದಾರಿ ಕಂಡುಕೊಳ್ಳಿ. ಸೋಲು, ಅವಮಾನ, ನಷ್ಟದ ಅನುಭವ ಉನ್ನತಿಗೆ ಹಾದಿ ತೋರುತ್ತದೆ ಎಂದು ಕಿವಿ ಮಾತು ಹೇಳಿದರು.
ಯಾವುದೇ ವ್ಯಕ್ತಿಗೆ ಮಾರ್ಗದರ್ಶನ ನೀಡಿ ಸಾಧನೆಗೆ ಪ್ರೇರಣೆ ನೀಡಬಹುದು. ಆದರೆ ಅವರನ್ನು ಸಾಧಕರನ್ನಾಗಿ ಮಾಡಲು ಸಾಧ್ಯವಿಲ್ಲ. ಆತ್ಮವಿಶ್ವಾಸ, ದೃಢ ಸಂಕಲ್ಪ ಮತ್ತು ಶ್ರದ್ಧಾಪೂರ್ವಕ ಕಾಯಕಗಳಿಂದ ಮಾತ್ರ ಸಾಧನೆ ಸಾಧ್ಯ. ಇದು ಕಲ್ಲು ಮುಳ್ಳಿನ ಹಾದಿ. ಅದನ್ನು ದಾಟಿ ಮುನ್ನಡೆದಾಗ ಮಾತ್ರ ಯಶ ಸ್ಸಿನ ಹಾದಿ ಕಂಡುಕೊಳ್ಳಬಹುದು ಎಂದರು.
ದೇಶದ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಖಾಸಗೀಕರಣ ವೊಂದೇ ಸೂಕ್ತ ಹಾಗೂ ಪರಿಹಾರ ಮಾರ್ಗ ಎಂದು ಪ್ರತಿಪಾದಿಸಿದ ಸಂಕೇಶ್ವರ, ಜಗತ್ತಿನ ಯಾವ ದೇಶದಲ್ಲಿಯೂ ಸರ್ಕಾರವೇ ಕಂಪನಿಗಳನ್ನು ತೆರೆದು ವಹಿವಾಟು ನಡೆಸುವ ಸಂಪ್ರದಾಯವಿಲ್ಲ. ಶಿಕ್ಷಣ, ಆರೋಗ್ಯ, ಮೂಲಸೌಲಭ್ಯ ಅಭಿವೃದ್ಧಿಗೆ ಮಾತ್ರ ಸರ್ಕಾರದ ಸೇವೆ ಸೀಮಿತವಾಗಿವೆ. ಇದರಿಂದ ಎಲ್ಲೆಡೆ ಯೋಜನೆಗಳು ಸಮರ್ಪಕ ವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಹೇಳಿದರು.
ಖಾಸಗಿ ಸಂಸ್ಥೆಗಳಲ್ಲಿ ಏನೇ ಲಾಭ ಗಳಿಸಿದರೂ ಅದಕ್ಕೊಂದು ದಾಖಲೆ ಇರುತ್ತದೆ. ರಾಜಕೀಯ ಹಿತಾಸಕ್ತಿಯಿಂದ ಮುಕ್ತವಾಗಿರುತ್ತದೆ. ಜನಸಾಮಾನ್ಯರನ್ನೂ ಭ್ರಷ್ಟರನ್ನಾಗಿಸುವ ವ್ಯವಸ್ಥೆ ಇರುವುದಿಲ್ಲ. ಆದರೆ ಸತ್ಯ ಶುದ್ಧ ಕಾಯಕ ಪ್ರಜ್ಞೆ, ನಿಸ್ವಾರ್ಥ, ಪ್ರಾಮಾಣಿಕತನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜಾಗೃತಗೊಳ್ಳಬೇಕು. ಆಗಷ್ಟೇ ಸಮಾಜವನ್ನು ಸುಧಾರಿಸಲು, ಸದೃಢ ಭಾರತವನ್ನು ನಿರ್ಮಿಸಲು, ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ರಾಷ್ಟ್ರವೆಂದು ಗುರುತಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕೈಗೊಂಡ ನಿರ್ಧಾರ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮುನ್ನುಗ್ಗುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ, ಸಾಧನೆಗೆ ಬಡತನ ಅಥವಾ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ದಾವಿ ಸಮಾಚಾರ’ ಮತ್ತು ಯೂಟೂಬ್ ಚಾನೆಲ್ ‘ದಾವಿ ಟಿವಿ’ಯನ್ನು ವಿಜಯ ಸಂಕೇಶ್ವರ ಉದ್ಘಾ ಟಿಸಿದರು. ಸಿಂಡಿಕೇಟ್ ಸದಸ್ಯರಾದ ಮಲ್ಲಿಕಾ ರ್ಜುನ ಮಾಡಾಳು, ಡಾ. ಶ್ರೀಧರ, ಇನಾಯತ್ ಉಲ್ಲಾ ಟಿ, ವಿಜಯಲಕ್ಷ್ಮಿ ಹಿರೇಮಠ, ಪವನ್, ಆಶೀಶ್ ರೆಡ್ಡಿ, ಕರ್ನಾಟಕ ವೃತ್ತಿ ನಾಟಕ ಅಕಾಡೆಮಿ ಅಧ್ಯಕ್ಷ ಯಶವಂತ ಸರದೇಶಪಾಂಡೆ, ಲಲಿತಾ ವಿಜಯ ಸಂಕೇಶ್ವರ ಉಪಸ್ಥಿತರಿದ್ದರು.
ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್ ವಂದಿಸಿದರು. ಡಾ. ಭೀಮಾ ಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.