ರೈತರು ಬೆಳೆದ ಭತ್ತ, ರಾಗಿ ಇತರೆ ಧಾನ್ಯಗಳು ಎಂಎಸ್‍ಪಿ ಬೆಲೆಗಿಂತಲೂ ಕಡಿಮೆಗೆ ಮಾರಾಟ

ನಗರದಲ್ಲಿ ರೈತರಿಂದ ಪ್ರತಿಭಟನೆ

ದಾವಣಗೆರೆ, ಜೂ.17- ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,   ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ತಹಸೀಲ್ದಾರ್ ಕಚೇರಿ ಮುಂದೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್ ಮತ್ತು ರೈತ ಮುಖಂಡರ ನೇತೃತ್ವದಲ್ಲಿ ಜಮಾಯಿಸಿದ್ದ ಪದಾಧಿಕಾರಿಗಳು ಪ್ರತಿಭಟಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಾಲ್ಲೂಕು ಆಡಳಿತದ ಮುಖಾಂತರ ಮನವಿ ಮಾಡಿದರು.

ಪ್ರಸ್ತುತ ಹೂವು-ಹಣ್ಣು, ತರಕಾರಿ ಬೆಳೆದಿರುವ ರೈತರಿಗೆ ಕೊರೊನಾ ಸಂಕಷ್ಟವನ್ನುಂಟು ಮಾಡಿದ್ದು, ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಜಮೀನಿನಲ್ಲಿ ಕೊಳೆತು ನಷ್ಟವುಂಟಾಗಿದೆ. ಅಲ್ಲದೇ, ರೈತರು ಬೆಳೆದ ಭತ್ತ, ರಾಗಿ ಇತರೆ ಧಾನ್ಯಗಳಿಗೆ ಕೇಂದ್ರ ಸರ್ಕಾರದ ಎಂಎಸ್‍ಪಿ ಬೆಲೆಗಿಂತಲೂ ಕಡಿಮೆ ಮಾರಾಟವಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಂಪನಿ ಮಾಲೀಕರು ಕೂಡಲೇ ಬಾಕಿ ಹಣ ನೀಡಬೇಕು. ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಏರಿಕೆಯಿಂದ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ತಕ್ಷಣವೇ ಕೇಂದ್ರ ಸರ್ಕಾರ ಈ ಬೆಲೆಗಳನ್ನು ಇಳಿಸಬೇಕು. ರಾಜ್ಯ ಮತ್ತು ಜಿಲ್ಲೆಯಲ್ಲಿ ಕೊರೊನಾ ತಪಾಸಣೆ ವೇಗ ಕಡಿಮೆಯಾಗಿದ್ದು, ಲಸಿಕೆಯ ವಿತರಣೆ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ. ನಗರ ಪ್ರದೇಶಗಳಿಗೆ ಸೀಮಿತವಾದ ಲಸಿಕೆ ಹಂಚಿಕೆಯನ್ನು ಗ್ರಾಮೀಣ ಭಾಗಕ್ಕೂ ಒತ್ತು ನೀಡಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ತಮ್ಮ ಸ್ವಂತ ಖರ್ಚಿನಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ನಗರದ ಜನತೆಗೆ ಲಸಿಕೆ ಹಾಕಿಸಿದ ಮಾದರಿಯಂತೆ ರಾಜ್ಯದ ಸಂಸದರು, ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಮತದಾರರಿಗೆ ಲಸಿಕೆ ಹಾಕಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಆರ್.ಜಿ.ಬಸವರಾಜ್, ವೈ.ಸಿ. ಅಶೋಕ್‌, ಶೇಖರ್ ನಾಯ್ಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!