ಕೋವಿಡ್ ಸಂಕಷ್ಟದಲ್ಲಿ ತರಳಬಾಳು ಶ್ರೀಗಳ ಮಾನವೀಯ ಸೇವೆ

ಶ್ರೀಮಠವು  ಸ್ವಾತಂತ್ರ್ಯ ಪೂರ್ವದಿಂದಲೂ ಜಾತ್ಯತೀತವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ. ಶಿಕ್ಷಣ, ದಾಸೋಹ, ಪಾನ ನಿಷೇಧ, ನಿರ್ಮಲ ಕರ್ನಾಟಕ, ನ್ಯಾಯದಾನ, ಏತ ನೀರಾವರಿ, ಬೆಳೆ ವಿಮೆ ಮುಂತಾದ ಜನಪರ ಕಾರ್ಯಗಳಲ್ಲಿ  ಶ್ರೀಮಠದ ಸೇವೆ ಅನನ್ಯವಾದುದು. ನಾಡು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಜನತೆಗೆ ಸಹಾಯ ಹಸ್ತ ಚಾಚಿ, ನೊಂದವರ ಕಣ್ಣೀರನ್ನು ಹೊರೆಸುವುದರಲ್ಲಿ ಸದಾ ಮುಂದು. ಪ್ರವಾಹ, ಭೂಕಂಪ, ಬರದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಶ್ರೀಮಠದ ಪೂಜ್ಯರ ನೇತೃತ್ವದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಕೊರೊನಾದ ಈ ಸಂಕಷ್ಟದ ಕಾಲದಲ್ಲೂ ಸಹ ಅದೇರೀತಿ  ಸೇವೆಯನ್ನು ಮುಂದುವರೆಸಿದೆ.

ಈ ಸಾಂಕ್ರಾಮಿಕ ರೋಗದಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸುತ್ತಿರುವುದಕ್ಕೆ  ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸ್ಪಂದಿಸಿ, ಮಾನವೀಯ ನೆರವನ್ನು ಒದಗಿಸುತ್ತಿದ್ದಾರೆ. ಶ್ರೀಗಳ  ಮಾರ್ಗದರ್ಶನದಲ್ಲಿ ಈಗಾಗಲೇ  ಸಿರಿಗೆರೆ, ಚಿತ್ರದುರ್ಗ, ದಾವಣಗೆರೆ, ಹರಿಹರ, ಹರಪನಹಳ್ಳಿ ಬೆಂಗಳೂರು, ಹೊಳಲ್ಕೆರೆ ಮುಂತಾದ ಕಡೆ ಶ್ರೀಮಠದಿಂದ ಅಗತ್ಯ ಸೇವೆಯನ್ನು ಒದಗಿಸುತ್ತಿದೆ. 

ದಾವಣಗೆರೆಯಲ್ಲಿ ತರಳಬಾಳು ಸೇವಾ ಸಮಿತಿ ಮತ್ತು ಶಿವಶೈನ್ಯ ಯುವಕ ಸಂಘದವರ ಮೂಲಕ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಉಚಿತ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರಿಗೆ ಮತ್ತು ಅವಲಂಬಿತರಿಗೆ ಅವರಿದ್ದಲ್ಲಿಗೇ ಹೋಗಿ ಊಟ ಒದಗಿಸುವುದು ಅತ್ಯಂತ ಪರಿಣಾಮಕಾರಿಯಾದುದು. ಅದಕ್ಕೆ  ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ಪ್ರತಿದಿನ 3000 ಊಟದ ಪೊಟ್ಟಣಗಳನ್ನು ಹಂಚಲಾಗುತ್ತಿದೆ. ಇದಕ್ಕಾಗಿ ತರಳಬಾಳು ಬೃಹನ್ಮಠದ  ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಪ್ರತಿನಿತ್ಯ 15 ಜನ ಬಾಣಸಿಗರು ಶುಚಿ ರುಚಿಯಾದ ಪೌಷ್ಟಿಕ ಆಹಾರವನ್ನು ತಯಾರಿಸುತ್ತಾರೆ. ವಾರಕ್ಕೊಮ್ಮೆ ಹೋಳಿಗೆ, ಪಾಯಸ ಮುಂತಾದ ಸಿಹಿ ಭಕ್ಷ್ಯಗಳು ಮತ್ತು ಹಣ್ಣುಗಳು ಸೇರಿದಂತೆ ನಿತ್ಯವೂ ಚಪಾತಿ, ತರಕಾರಿ ಪಲ್ಯ, ಅನ್ನ-ಸಾಂಬಾರು ಪೊಟ್ಟಣಗಳನ್ನು ಸಿದ್ಧ ಮಾಡಲಾಗುತ್ತಿದೆ.  ದಾವಣಗೆರೆಯ ಜಿಲ್ಲಾ ಆಸ್ಪತ್ರೆ, ತರಳಬಾಳು ಕೋವಿಡ್ ಕೇರ್ ಸೆಂಟರ್, ಖಾಸಗಿ ನರ್ಸಿಂಗ್ ಹೋಂ,  ಪೊಲೀಸ್ ಸಿಬ್ಬಂದಿ, ಪತ್ರಕರ್ತರ ಕೂಟ ಮುಂತಾದೆಡೆ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕರ್ತರು ವಿತರಿಸುತ್ತಾರೆ.  ಇದಕ್ಕಾಗಿ  ಭಕ್ತರು ಸ್ವಯಂ ಪ್ರೇರಣೆಯಿಂದ  ನಿತ್ಯವೂ ಅಕ್ಕಿ, ಎಣ್ಣೆ, ತೆಂಗಿನಕಾಯಿ, ತರಕಾರಿ ಸೇರಿದಂತೆ, ಅಗತ್ಯ ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಮಾಗನೂರು ಉಮೇಶ್ ಮತ್ತು ಶಶಿಧರ ಹೆಮ್ಮನಬೇತೂರು ಇವರ ನೇತೃತ್ವದ ಯುವಕರ ತಂಡವು ಸ್ವಲ್ಪವೂ ವ್ಯತ್ಯಯವಾಗದಂತೆ ಶಿಸ್ತು ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. 

ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಸಂಸ್ಥೆಯ ಸುಸಜ್ಜಿತ ವಿದ್ಯಾರ್ಥಿ ನಿಲಯವನ್ನು ಮೀಸಲಿಡಲಾಗಿದೆ. ಇಲ್ಲಿ 96 ಹಾಸಿಗೆಗಳ ವ್ಯವಸ್ಥೆ ಇದೆ.  ಪ್ರತಿದಿನ ಸೋಕಿಂತರಿಗೆ ಮತ್ತು ಸಿಬ್ಬಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಸೋಂಕಿತರ ಉಪಚಾರಕ್ಕಾಗಿ ವೈದ್ಯಕೀಯ ಸಿಬ್ಬಂದಿಯನ್ನೂ ಸಹ ನೇಮಿಸಲಾಗಿದೆ.  ಇಲ್ಲಿ ಪ್ರತಿನಿತ್ಯ   ನುರಿತ ಯೋಗ ಗುರುಗಳು ಸರಳ ಯೋಗಾಸನ ಮತ್ತು ಪ್ರಾಣಾಯಾಮವನ್ನು ಹೇಳಿಕೊಡುತ್ತಿದ್ದಾರೆ. ಸೋಂಕಿತರಿಗೆ  ಯಾವುದೇ ತೊಂದರೆಯಾಗದಂತೆ ಜಿಲ್ಲಾ ಆಡಳಿತ ನಿಗಾವಹಿಸುತ್ತಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಸಂಸ್ಥೆಯ ಸುಸಜ್ಜಿತ ವಿದ್ಯಾರ್ಥಿ ನಿಲಯವನ್ನು ಮೀಸಲಿಡಲಾಗಿದೆ. ಇಲ್ಲಿ 96 ಹಾಸಿಗೆಗಳ ವ್ಯವಸ್ಥೆ ಇದೆ.  ಪ್ರತಿದಿನ ಸೋಕಿಂತರಿಗೆ ಮತ್ತು ಸಿಬ್ಬಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಸೋಂಕಿತರ ಉಪಚಾರಕ್ಕಾಗಿ ವೈದ್ಯಕೀಯ ಸಿಬ್ಬಂದಿಯನ್ನೂ ಸಹ ನೇಮಿಸಲಾಗಿದೆ.  ಇಲ್ಲಿ ಪ್ರತಿನಿತ್ಯ   ನುರಿತ ಯೋಗ ಗುರುಗಳು ಸರಳ ಯೋಗಾಸನ ಮತ್ತು ಪ್ರಾಣಾಯಾಮವನ್ನು ಹೇಳಿಕೊಡುತ್ತಿದ್ದಾರೆ. ಸೋಂಕಿತರಿಗೆ  ಯಾವುದೇ ತೊಂದರೆಯಾಗದಂತೆ ಜಿಲ್ಲಾ ಆಡಳಿತ ನಿಗಾವಹಿಸುತ್ತಿದೆ.

ಸಿರಿಗೆರೆಯಲ್ಲಿಯೂ ಶ್ರೀಮಠದ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಸೆಂಟರ್‌ ಆಗಿ ಪರಿವರ್ತಿಸಲಾಗಿದೆ.  ದಾವಣಗೆರೆಯಂತೆಯೇ ಪ್ರತಿನಿತ್ಯ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಿದ್ಧಪಡಿಸಿದ  ಆಹಾರ ಪೊಟ್ಟಣಗಳನ್ನು ಸಿರಿಗೆರೆ ಕೋವಿಡ್ ಸೆಂಟರ್, ಭರಮಸಾಗರ ಆಸ್ಪತ್ರೆ, ಚಿತ್ರದುರ್ಗದ ಸಾರ್ವಜನಿಕ ಆಸ್ಪತ್ರೆ, ಬಸಪ್ಪ ಆಸ್ಪತ್ರೆ ಮುಂತಾದ ಕಡೆ ವಿತರಿಸಲಾಗುತ್ತಿದೆ. ಸಿರಿಗೆರೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆ ಅಥವಾ ಕೋವಿಡ್ ಕೇರ್‌ ಸೆಂಟರ್‌ಗೆ ತಲುಪಿಸಲು ಶ್ರೀಮಠದ ಆಂಬ್ಯುಲೆನ್ಸ್ ಸೇವೆಯನ್ನು ಸಹ ಒದಗಿಸಲಾಗಿದೆ. ಶ್ರೀಮಠದ ತೋಟದಲ್ಲಿ ಬೆಳೆದ ತರಕಾರಿಗಳನ್ನು ಸಹ ಸಿರಿಗೆರೆ ಗ್ರಾಮದಲ್ಲಿ ಮನೆ ಮನೆಗಳಿಗೆ ಉಚಿತವಾಗಿ ಹಂಚಲಾಗುತ್ತಿದೆ. 

ಕೋವಿಡ್  ಎರಡನೆಯ ಅಲೆಯಿಂದ ಸೂಕ್ತ ಚಿಕಿತ್ಸೆ ಸಿಗದೆ ಬ್ಯಾಡಗಿಯ ಮಹಿಳೆಯೊಬ್ಬಳು ಸಾವನ್ನಪ್ಪಿದರು. ಸ್ವಾಮೀಜಿಯವರು ಈ ಸಂಗತಿ ತಿಳಿದ ತಕ್ಷಣ ಅಲ್ಲಿಯ ಅಸ್ಪತ್ರೆಗೆ 36 ಜಂಬೋ ಆಕ್ಸಿಜನ್ ಸಿಲಿಂಡರ್ ಕಳುಹಿಸಿಕೊಟ್ಟು ಮಾನವೀಯತೆ ತೋರಿದರು. 

ಇದೇ ರೀತಿ ಹರಿಹರದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಸೋಂಕಿತರು ಮತ್ತು ವಾರಿಯರ್ಸ್‌ಗೆ  ದಾಸೋಹ ಸೇವೆಯನ್ನು ಒದಗಿಸುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಶ್ರೀಮಠದ ಕಲ್ಯಾಣ ಮಂಟಪವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಿಟ್ಟುಕೊಟ್ಟಿದೆ. ಹೊಳಲ್ಕೆರೆಯಲ್ಲಿ ತರಳಬಾಳು ಸೇವಾ ಸಮಿತಿ ಮತ್ತು ಬೆಂಗಳೂರು ಮಹಾ ನಗರದಲ್ಲೂ ತರಳಬಾಳು ಧಾರ್ಮಿಕ ಕೇಂದ್ರದಿಂದ ಅಗತ್ಯ ಇರುವ ಕಡೆಗೆ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಪ್ರತಿನಿತ್ಯವೂ ಎಲ್ಲಾ ಕೇಂದ್ರಗಳಿಂದ ಮಾಹಿತಿ ಪಡೆದು, ಅಗತ್ಯ ಇರುವ ಕಡೆ ಸೂಕ್ತ ಸಲಹೆ, ಮಾರ್ಗದರ್ಶನ ಮಾಡುತ್ತಿದ್ದಾರೆ. ಸೋಂಕಿತರನ್ನು ದೂರವಾಣಿ ಮೂಲಕ ಮಾತನಾಡಿಸಿ, ಒತ್ತಡಕ್ಕೆ ಒಳಗಾಗಬಾರದೆಂದು  ಆತ್ಮವಿಶ್ವಾಸ ತುಂಬುತ್ತಾರೆ.  ಜನತೆಗೂ ಸಹ ಜಾಗೃತವಾಗಿರಲು ಮಾಸ್ಕ್ ಧರಿಸಿ, ಅಂತರ ಕಾಪಾಡಿ, ಅನಗತ್ಯ ತಿರುಗಾಡುವುದನ್ನು ನಿಲ್ಲಿಸಿ ಎಂದು ಕರೆ ನೀಡುತ್ತಿದ್ದಾರೆ.


ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
[email protected]

error: Content is protected !!