ದುಬಾರಿಯಾಗುತ್ತಿರುವ ಜೀವನ, ದುಬಾರಿ ಶಿಕ್ಷಣದಿಂದ ಮನೆಗೊಂದು ಮಗು ಸಾಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಕೊರೊನಾದಿಂದ ಮಗುವೊಂದು ಹೊರೆ ಎನ್ನುವವರ ಸಂಖ್ಯೆ ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ
ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಆಧಾರ ರಹಿತವಾಗಿ ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ವಾಸ್ತವಿಕವಾಗಿ ಮೂರನೇ ಅಲೆ ಬರುವುದಕ್ಕೆ ಮೊದಲೇ ಮಕ್ಕಳ ಮೇಲೆ ಪರಿಣಾಮವಾಗುತ್ತಿದೆ, ಅದೂ ಹುಟ್ಟದೇ ಇರುವ ಮಕ್ಕಳು!
ಇದೇನು ಎಡವಟ್ಟಿನ ಮಾತು ಎಂದಿರಾ? ಅದೇನೆಂದರೆ ಯುರೋಪ್ನಲ್ಲಿ ಕೊರೊನಾ ಅಲೆಯಿಂದ ಉಂಟಾದ ಆರ್ಥಿಕ ಹೊಡೆತದಿಂದ ತತ್ತರಿಸಿರುವ ಮಹಾಜನತೆ, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಮನಸ್ಸು ಮಾಡುತ್ತಿಲ್ಲವೆಂದು ವರದಿಗಳು ಬಂದಿವೆ.
ಕೊರೊನಾ ಬಂದಾಗ, ಲಾಕ್ಡೌನ್ನಿಂದ ಜನ ಮನೆಯಲ್ಲಿರುತ್ತಾರೆ. ಮಕ್ಕಳ ಜನನ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಉಲ್ಟಾ ಪರಿಸ್ಥಿತಿ ಆಗುತ್ತಿದೆ. ಅನಿಶ್ಚಿತತೆಯ ದಿನಗಳಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ಗೊಡವೆ ಬೇಡ ಎಂದು ಯುರೋಪ್ ಜನತೆ ನಿರ್ಧರಿಸಿರುವಂತಿದೆ.
ಕೊರೊನಾಗೆ ಮೊದಲೇ ಯುರೋಪ್ ಜನಸಂಖ್ಯೆ ಇಳಿಮುಖವಾಗಿತ್ತು. ಜರ್ಮನಿಯಂತಹ ದೇಶಗಳು ಸಾಕಷ್ಟು ದಿನಗಳಿಂದ ಜನಸಂಖ್ಯೆ ಕುಸಿತದ ಸಮಸ್ಯೆ ಎದುರಿಸುತ್ತಿವೆ. ಕೊರೊನಾ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. ಒಟ್ಟಾರೆ, ಕೊರೊನಾದಿಂದ ಉಂಟಾಗುವ ಸಾವುಗಳಿಗಿಂತಲೂ, ಕೊರೊನಾದ ಪರಿಣಾಮಗಳು ದೂರಗಾಮಿಯಾಗಿ ಕಾಡುವ ಲಕ್ಷಣಗಳು ಕಂಡು ಬರುತ್ತಿವೆ.
ಕೊರೊನಾದಿಂದ ಸಾವುಗಳು ಹೆಚ್ಚಾಗಿವೆ. ಆದರೆ, ದೀರ್ಘಾವಧಿಯಲ್ಲಿ ಇದರ ಪರಿಣಾಮ ಹೆಚ್ಚೇನೂ ಅಲ್ಲ. ಆದರೆ, ಮಕ್ಕಳ ಜನನ ಕುಸಿತ ದೊಡ್ಡ ಸಮಸ್ಯೆಯಾಗಲಿದೆ. ಈ ಹಿಂದೆ 2008ರ ಹಣಕಾಸು ಬಿಕ್ಕಟ್ಟು ಸಮಯದಲ್ಲೂ ಮಕ್ಕಳ ಜನನ ಕಡಿಮೆಯಾಗಿತ್ತು ಎಂದು ಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದ ಜನಸಂಖ್ಯಾ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಗುನ್ನಾರ್ ಆಂಡರ್ಸನ್ ಹೇಳಿದ್ದಾರೆ.
ಭವಿಷ್ಯದ ಅನಿಶ್ಚಿತತೆ ಕಾರ್ಮಿಕರ ಬೇಡಿಕೆ ಅಸ್ಥಿರಗೊಳಿಸಿದೆ. ಸರ್ಕಾರಗಳು ವೆಚ್ಚ ಕಡಿಮೆ ಮಾಡುತ್ತಿವೆ. ಇದರಿಂದಾಗಿ ಜನರು ಬಿಕ್ಕಟ್ಟಿನ ಸಮಯದಲ್ಲಿ ಮಕ್ಕಳನ್ನು ಹೊಂದುವಂತಹ ಗಂಭೀರ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.
ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್ ಹಾಗೂ ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಲಾಕ್ಡೌನ್ ವೇಳೆ ಮಕ್ಕಳನ್ನು ಹೊಂದುವ ಯೋಜನೆಯನ್ನು ಹಲವಾರು ಜನ ಕೈ ಬಿಟ್ಟಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.
ಪೊಲ್ಯಾಂಡ್ನಲ್ಲಿ ಮಕ್ಕಳ ಜನನ 3.57 ಲಕ್ಷವಾಗಿದ್ದು, ಇದು 15 ವರ್ಷದಲ್ಲೇ ಅತಿ ಕಡಿಮೆ. ಇಟಲಿಯಲ್ಲಿ ಕಳೆದ ಡಿಸೆಂಬರ್ ವೇಳೆಗೆ ಜನನ ಪ್ರಮಾಣ ಶೇ.21.6ರಷ್ಟು ಇಳಿಕೆಯಾಗಿತ್ತು. ಜರ್ಮನಿಯಲ್ಲಿ 2011ರ ನಂತರ ಮೊದಲ ಬಾರಿಗೆ ಜನಸಂಖ್ಯೆ ಬೆಳವಣಿಗೆಯಾಗಿಲ್ಲ.
ಯುರೋಪಿನ ಸಮಸ್ಯೆಗೆ ನಾವೇಕೆ ಗೋಳಾಡುವುದು ಎಂದು ನೀವು ಕೇಳಬಹುದು. ಆದರೆ, ಈ ಸಮಸ್ಯೆ ಯುರೋಪ್ಗೆ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಇದೇ ಸಮಸ್ಯೆ ಕಂಡು ಬರುವ ಲಕ್ಷಣಗಳಿವೆ. ಮುಂಬರುವ ವರ್ಷಗಳಲ್ಲಿ ಮಕ್ಕಳ ಹುಟ್ಟು ಹಬ್ಬದ ಪಾರ್ಟಿಗಳಿಗಿಂತ ಅಂತ್ಯಕ್ರಿಯೆಗಳು ಹೆಚ್ಚಾಗಬಹುದು. ಖಾಲಿ ಮನೆಗಳು ಸಾಮಾನ್ಯ ದೃಶ್ಯವಾಗಬಹುದು ಎಂದು ಕಳೆದ ತಿಂಗಳು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿತ್ತು.
ದಿ ಲ್ಯಾನ್ಸೆಟ್ ವರದಿಯ ಪ್ರಕಾರ 195 ದೇಶಗಳ ಪೈಕಿ 183 ದೇಶಗಳಲ್ಲಿ 2100ರ ವೇಳೆಗೆ ಜನನಕ್ಕಿಂತ ಮರಣ ಪ್ರಮಾಣವೇ ಹೆಚ್ಚಾಗಲಿದೆ. ಇರುವ ಜನಸಂಖ್ಯೆ ಕಾಯ್ದುಕೊಳ್ಳಲು ಅಗತ್ಯವಾದಷ್ಟು ಮಕ್ಕಳು ಈ ದೇಶದಲ್ಲಿ ಜನಿಸುವುದಿಲ್ಲ. ಈ ವರದಿಯಲ್ಲಿ ಬಳಸಲಾಗಿರುವ ಮಾದರಿ ಪ್ರಕಾರ, ಈಗ 141 ಕೋಟಿ ಇರುವ ಚೀನಾದ ಜನಸಂಖ್ಯೆ, ಶತಮಾನದ ಅಂತ್ಯದ ವೇಳೆಗೆ 73 ಕೋಟಿಗೆ ಇಳಿಯಲಿದೆ.
ಜನಸಂಖ್ಯಾ ಸ್ಫೋಟದಷ್ಟೇ, ಜನಸಂಖ್ಯಾ ಕುಸಿತವೂ ಕರಾಳ ಪರಿಣಾಮ ತರಲಿದೆ. ಇಟಲಿಯ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ವಾರ್ಡುಗಳು ಒಂದೊಂದಾಗಿ ಮುಚ್ಚುತ್ತಿವೆ. ಚೀನಾದ ಈಶಾನ್ಯದಲ್ಲಿ ಜನರಹಿತ ನಗರಗಳು ಹುಟ್ಟಿಕೊಳ್ಳುತ್ತಿವೆ. ದಕ್ಷಿಣ ಕೊರಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಅಗತ್ಯ ಪ್ರಮಾಣದ ವಿದ್ಯಾರ್ಥಿಗಳೇ ಸಿಗುತ್ತಿಲ್ಲ. ಜರ್ಮನಿಯಲ್ಲಿ ಸಾವಿರಾರು ಮನೆಗಳನ್ನು ಉರುಳಿಸಿ, ಆ ಜಾಗವನ್ನು ಪಾರ್ಕ್ಗಳಾಗಿ ಪರಿವರ್ತಿಸಲಾಗುತ್ತಿದೆ.
ಅಭಿವೃದ್ಧಿಶೀಲ ದೇಶಗಳು ಹೆಚ್ಚಾಗಿರುವ ಆಫ್ರಿಕಾ ಖಂಡದಲ್ಲೂ ಜನನ ಪ್ರಮಾಣ ಕಡಿಮೆಯಾಗುತ್ತಿದೆ. ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಜನಸಂಖ್ಯೆ ಕುಸಿತ ಸಾಮಾನ್ಯ ಪ್ರಕ್ರಿಯೆಯಾಗಲಿದೆ ಎಂಬ ಆತಂಕವಿದೆ.
ಭಾರತದಲ್ಲೂ ಸಹ ಜನಸಂಖ್ಯಾ ಬೆಳವಣಿಗೆ ನಿರಂತರವಾಗಿ ಕುಸಿಯುತ್ತಿದೆ. 1970 ರಲ್ಲಿ ಜನಸಂಖ್ಯಾ ಬೆಳವಣಿಗೆ ದರ ಶೇ.2.2ರಷ್ಟಿದ್ದದ್ದು, 2010ರ ದಶಕದಲ್ಲಿ ಶೇ.1.2ಕ್ಕೆ ಕುಸಿದಿದೆ. ಮುಂದಿನ ದಶಕದಲ್ಲಿ ಜನಸಂಖ್ಯೆ ಸ್ಥಿರವಾಗುವ ಸೂಚನೆಗಳಿವೆ. ನಂತರದಲ್ಲಿ ಕುಸಿತದ ಸಾಧ್ಯತೆ ಕಾಣುತ್ತಿದೆ.
ಭಾರತದಲ್ಲಿ ಜನಸಂಖ್ಯೆ ಸ್ಥಿರವಾದರೂ ಸಮಸ್ಯೆಯಾಗದು ಎಂದು ಈ ಹಿಂದೆ ಹಲವಾರು ಪರಿಣಿತರು ಅಭಿಪ್ರಾಯ ಪಟ್ಟಿದ್ದರು. ಆದರೆ, ಭಾರತದಲ್ಲಿ ಕೊರೊನಾದ ಎರಡು ಅಲೆಗಳಿಂದ ಆರ್ಥಿಕತೆ ತತ್ತರಿಸುತ್ತಿದೆ. ಇದು ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೃಷಿ ಅವಲಂಬಿತ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲೇ ಕೊರೊನಾದಿಂದ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ದೇಶದ ನಗರ ಪ್ರದೇಶಗಳಲ್ಲಿ ಮೊದಲೇ ಜನಸಂಖ್ಯಾ ಬೆಳವಣಿಗೆ ಕಡಿಮೆಯಾಗಿತ್ತು. ಈಗ ಆರ್ಥಿಕ ಹೊಡೆತದಿಂದ ಬದುಕುವುದೇ ಕಷ್ಟವಾಗಿರುವಾಗ, ಮಕ್ಕಳು – ಸಂಸಾರ ಇನ್ನಷ್ಟು ದುಬಾರಿಯಾಗಲಿದೆ.
ದುಬಾರಿಯಾಗುತ್ತಿರುವ ಜೀವನ, ದುಬಾರಿ ಶಿಕ್ಷಣದಿಂದ ಮನೆಗೊಂದು ಮಗು ಸಾಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಕೊರೊನಾದಿಂದ ಮಗುವೊಂದು ಹೊರೆ ಎನ್ನುವವರ ಸಂಖ್ಯೆ ಹೆಚ್ಚಾದರೆ ಅಚ್ಚರಿ ಪಡಬೇಕಿಲ್ಲ.
ಎಸ್.ಎ. ಶ್ರೀನಿವಾಸ್
[email protected]