ಚಳ್ಳಕೆರೆ, ಮಾ.21 – ಕಡಲೆ ಬೇಳೆ ಕಟಾವಿಗೆ ಬಂದ ಸಮಯ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಕಡಲೆಕಾಳು ಖರೀದಿ ಕೇಂದ್ರ ತೆರೆದಿದ್ದರೆ ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗು ತ್ತಿತ್ತು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿ ಚಿತ್ರದುರ್ಗ, ರಾಜ್ಯ ಸಹಕಾರ ಮಾರಾಟ ಹಾಗೂ ಮಹಾ ಮಂಡಳಿ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತಾಲ್ಲೂಕಿನ ರಾಮಜೋಗಿಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ನೋಂದಣಿ ಮತ್ತು ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅತಿವೃಷ್ಟಿಯಿಂದಾಗಿ ತಾಲ್ಲೂಕಿನಲ್ಲಿ ಈ ಬಾರಿ ಕಡಲೆಕಾಳು ಬೆಳೆ ಇಳುವರಿ ಕುಂಠಿತಗೊಂಡಿದೆ. ಪ್ರತಿ ಕ್ವಿಂಟಾಲ್‍ಗೆ 5100 ಬೆಂಬಲ ಬೆಲೆ ದೊರೆಯುತ್ತಿದೆ. ಆದ್ದರಿಂದ ಸರ್ಕಾರ ಖರೀದಿ ಕೇಂದ್ರಕ್ಕೆ ಕಡಲೆಯನ್ನು ಮಾರಾಟ ಮಾಡುವ ಮೂಲಕ ಬೆಂಬಲ ಬೆಲೆ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಚಿತ್ರದುರ್ಗ ಎಪಿಎಂಸಿ ವ್ಯವಸ್ಥಾಪಕ ರಾಜಪ್ಪ, ಮಹಾ ಮಂಡಳದ ನಿರ್ದೇಶಕ ಗಿರೀಶ್, ಚಿಕ್ಕಮಧುರೆ ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್‍ಬಾಬು, ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇಶ್‍ರೆಡ್ಡಿ, ಮಹಾ ಮಂಡಳದ ನಿರ್ದೇಶಕ ರಂಗಸ್ವಾಮಿ, ಕಾರ್ಯದರ್ಶಿ ಸತ್ಯನಾರಾಯಣ ರೆಡ್ಡಿ, ರೈತ ಪ್ರಶಾಂತ್‍ರೆಡ್ಡಿ, ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.