ಕೊರೊನಾದಲ್ಲಿ ಹೆಚ್ಚಾದ ಸೈಬರ್‌ ವಸೂಲಿ

ಹೊಸ ಇಂಟರ್‌ನೆಟ್‌ ಕಡೆ ಹೆಚ್ಚಿದ ಒಲವು

ಬ್ರಿಟಿಷ್ ಕೊಲಂಬಿಯಾ/ಟೊರಾಂಟೋ (ಕೆನಡಾ), ಜೂ. 16 – ವಾಸ್ತವ ಜಗತ್ತು ಕೊರೊನಾದಿಂದ ಪೀಡಿಸಲ್ಪಡುತ್ತಿರುವಂತೆಯೇ, ಆನ್‌ಲೈನ್‌ ಜಗತ್ತು ಈಗ ರಾನ್‌ ಸಮ್‌ವೇರ್‌ (ಹಣ ವಸೂಲಿಯ ತಂತ್ರಾಂಶ) ಕಾಟದಿಂದ ಬಳಲುತ್ತಿದೆ.

ಇತ್ತೀಚೆಗೆ ಕೊಲೊನಿಯಲ್ ಪೈಪ್‌ಲೈನ್‌ ಹಾಗೂ ಜೆಬಿಎಸ್‌ ಯುಎಸ್‌ಎ ಹೋಲ್ಡಿಂಗ್ಸ್ ಕಂಪನಿಗಳ ಮೇಲೆ
ರಾನ್‌ಸಮ್‌ವೇರ್‌  ದಾಳಿ ನಡೆದಿತ್ತು. ಇದು ಸಂಘಟಿತವಾದ ಸೈಬರ್ ದಾಳಿ ನಡೆಯುತ್ತಿರುವುದು ಮತ್ತು ಕಂಪನಿಗಳು ದಾಳಿ ಎದುರಿಸಲು ಪರದಾಡುತ್ತಿರುವುದನ್ನು ತೋರಿಸುತ್ತಿದೆ.

ಇದೆಲ್ಲದರ ಕಾರಣದಿಂದಾಗಿ ವಿಫಲವಾಗುತ್ತಿರುವ ಹಳೆಯ ಇಂಟರ್‌ನೆಟ್‌ ಬದಲು ಹೊಸ ಇಂಟರ್‌ನೆಟ್‌ ಬೇಕೆಂಬ ವಾದ ಮುಂದಿಡಲಾಗುತ್ತಿದೆ.

ಈಗ ಬಳಸಲಾಗುತ್ತಿರುವ ಇಂಟರ್‌ನೆಟ್‌ ಮೂಲ 1960ರದ್ದಾಗಿದೆ. ಆಗ ಅಮೆರಿಕದಲ್ಲಿ ಸೈನಿಕ, ರಾಜಕೀಯ ಹಾಗೂ ಕೈಗಾರಿಕಾ ವಲಯದವರನ್ನು ಸಂಪರ್ಕಿಸಲು ಅಪ್ರಾನೆಟ್‌ ಎಂಬ  ವ್ಯವಸ್ಥೆ ಬಳಸಲಾಗುತ್ತಿತ್ತು. ಇದು ಬಿಗಿ ನಿಯಂತ್ರಣದಿಂದ ಕೂಡಿತ್ತು.

ನಂತರ 1990ರಲ್ಲಿ ಟಿಮ್ ಬೆರ್ನರ್ಸ್ – ಲೀ ಅವರು ವರ್ಡ್‌ ವೈಡ್‌ ವೆಬ್‌ (ಡಬ್ಲ್ಯೂ.ಡಬ್ಲ್ಯೂ.ಡಬ್ಲ್ಯೂ.) ಎಂಬ ಬ್ರೌಸರ್ ಆಧರಿತ ಇಂಟರ್‌ನೆಟ್‌ ಪರಿಚಯಿಸಿದ್ದರು. ಅದೇ ಈಗ ಜಗತ್ತೆಲ್ಲ ಬಳಸುತ್ತಿರುವ ಇಂಟರ್‌ನೆಟ್‌ ಆಗಿದೆ.

ಸೈಬರ್ ಅಪರಾಧದ ದೊಡ್ಡ ಭಾಗ ರಾನ್‌ಸಮ್‌ವೇರ್‌  ಆಗಿದೆ. ಸುಯೋಜಿತವಾಗಿ ದಾಳಿ ಮಾಡಿ ಸಂಘಟನೆಗಳ ಮಾಹಿತಿ ಹಾಗೂ ವ್ಯವಸ್ಥೆಗಳನ್ನು ವಶಕ್ಕೆ ತೆಗೆದುಕೊಳ್ಳುವುದೇ ರಾನ್‌ಸಮ್‌ವೇರ್‌. ಕೊರೊನಾ ನಂತರ ರಾನ್‌ಸಮ್‌ವೇರ್‌ ದಾಳಿ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. 2020ರ ಕೊನೆ ಚತುರ್ಥದ ನಂತರ ಪ್ರತಿ ರಾನ್‌ಸಮ್‌ವೇರ್‌ ದಾಳಿಗೆ ನೀಡುವ ಹಣ ಶೇ.43ರಷ್ಟು ಹೆಚ್ಚಾಗಿದೆ. ಸರಾಸರಿ ಪಾವತಿ ಮೊತ್ತ 2 ಲಕ್ಷ ಡಾಲರ್ ಎಂದು ಹೇಳಲಾಗುತ್ತಿದೆ. 2021ರ ಮೊದಲ ಚತುರ್ಥದಲ್ಲಿ ಈ ದಾಳಿಗಳ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿದೆ.

ಕಳೆದ ಮಾರ್ಚ್‌ನಲ್ಲಿ ಸಿಎನ್‌ಎ ಫೈನಾನ್ಷಿಯಲ್‌ ಮೇಲೆ ರಾನ್‌ಸಮ್‌ವೇರ್‌ ದಾಳಿ ನಡೆಸಲಾಗಿತ್ತು. ಆಗ ಕಂಪನಿ 40 ದಶಲಕ್ಷ ಡಾಲರ್‌ಗಳನ್ನು ಪಾವತಿಸಿತ್ತು. ಇದು ಅಧಿಕೃತವಾಗಿ ಪಾವತಿಸಲಾದ ಅತಿ ದೊಡ್ಡ ರಾನ್‌ಸಮ್‌ವೇರ್‌ ಮೊತ್ತವಾಗಿದೆ.

ಇಂಟರ್‌ನೆಟ್‌ನಿಂದ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಇಂಟ್ರಾನೆಟ್‌ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಇಂಟರ್‌ನೆಟ್‌ ಮುಕ್ತ ಜಾಲವಾಗಿದ್ದರೆ, ಇಂಟ್ರಾನೆಟ್‌ ಮುಚ್ಚಿದ ಜಾಲವಾಗಿದೆ. ಇದನ್ನು ಕೆಲವೇ ಜನರು ಸೀಮಿತವಾಗಿ ಬಳಸಬಹುದಾಗಿದೆ. ಇದರಲ್ಲಿನ ವೆಬ್ ತಾಣಗಳ ಮೇಲೆ ಬಿಗಿ ನಿಯಂತ್ರಣ ಇರುತ್ತದೆ.

ಅಮೆಜಾನ್ ರೀತಿಯ ಆನ್‌ಲೈನ್‌ ಮಾರಾಟಗಾರರು, ಸರ್ಕಾರಗಳು, ಆರೋಗ್ಯ ಸೇವಾದಾರರು ಹಾಗೂ ದೊಡ್ಡ ಸಂಘಟನೆಗಳು ಈಗ ಅಪರಾಧಿಕ ದಾಳಿಗೆ ಸೊಪ್ಪು ಹಾಕುವ ಸ್ಥಿತಿಯಲ್ಲಿ ಇಲ್ಲ. ಮುಕ್ತತೆಗಿಂತ ಸುರಕ್ಷತೆಯತ್ತ ಒಲವು ಹೆಚ್ಚಾಗುತ್ತಿದೆ.

error: Content is protected !!