ಇಂದಿರಾ ಕ್ಯಾಂಟೀನ್‌ಗೆ ಶಾಸಕ ರಾಮಪ್ಪ ದಿಢೀರ್ ಭೇಟಿ

ಹರಿಹರ, ಜೂ.15- ನಗರದ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಎಸ್. ರಾಮಪ್ಪ ದಿಢೀರ್ ಭೇಟಿ ನೀಡಿ, ಸಾರ್ವಜನಿಕರಿಗೆ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ, ಕಡಿಮೆ ಪ್ರಮಾಣದಲ್ಲಿ ವಿತರಣೆ ಮಾಡುತ್ತಿರುವುದನ್ನು ಕಂಡು ಕ್ಯಾಂಟೀನ್ ವ್ಯವಸ್ಥಾಪಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಶೀಲ್ದಾರ್ ಕಚೇರಿಯ ಪಕ್ಕದ ಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ  ಊಟದ ಸಮಯಕ್ಕೆ ಭೇಟಿ ನೀಡಿದ ಶಾಸಕರು, ಒಳ ಆವರಣದಲ್ಲಿ ಸುತ್ತಾಡಿ, ಅಲ್ಲಿನ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳ ಶೇಖರಣಾ ಸ್ಥಳ ಪರಿಶೀಲಿಸಿದರು. ನಂತರ ಸಾರ್ವಜನಿಕರಿಗೆ ನೀಡಲಾಗುವ ಆಹಾರ ಪದಾರ್ಥದ ಪ್ರಮಾಣವನ್ನು ಸಹ ಗಮನಿಸಿ, ವಿತರಣೆ ಪ್ರಮಾಣ ಅಲ್ಪವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀಡುವಂತೆ ಅಲ್ಲಿನ ಮೇಲ್ವಿಚಾರಕರಿಗೆ ತಿಳಿಸಿದರು. ಸ್ವತಃ ತಾವೇ ಆಹಾರ ವಿತರಿಸಿದರು.

ನಗರಸಭೆಯಿಂದ ಮೇಲ್ವಿಚಾರಣೆಗೆ ನೇಮಕವಾಗಿರುವ ನಿಯೋಜಿತ ಕಿರಿಯ ಆರೋಗ್ಯ ನಿರೀಕ್ಷಕ ಭರಮಪ್ಪನವರಿಂದ ದಿನಂಪ್ರತಿ ಎಷ್ಟು ಜನರಿಗೆ ಉಪಹಾರ, ಊಟ ಮತ್ತು ರಾತ್ರಿ ಭೋಜನ ನೀಡಲಾಗುತ್ತದೆ ಎಂದು ಸಂಪೂರ್ಣ ಮಾಹಿತಿ ಪಡೆದರು. ಕ್ಯಾಂಟೀನ್ ಮುಖ್ಯಸ್ಥರು ಸ್ಥಳದಲ್ಲಿ ಇರದ ಕಾರಣ ನಾಳೆಗೆ ಅವರನ್ನು ಕರೆಸುವಂತೆ ತಿಳಿಸಿ, ಪೌರಾಯುಕ್ತೆ ಎಸ್. ಲಕ್ಷ್ಮಿ ಅವರಿಗೂ ಸಹ ದೂರವಾಣಿ ಮೂಲಕ ಮಾತನಾಡಿ, ನಾಳೆ ಭೇಟಿ ನೀಡಿ ಪರೀಶೀಲಿಸಲು ಸೂಚನೆ ನೀಡಿದರು. ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸು ತ್ತಿಲ್ಲ. ಅವುಗಳನ್ನೂ ಸಹ ಸರಿಪಡಿಸುವಂತೆ ಸ್ವಲ್ಪ ಖಾರವಾಗಿಯೇ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಭರಮಪ್ಪ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನದ ಉಪಯೋಗವನ್ನು ಸುಮಾರು 225 ರಿಂದ 285 ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿ ನಗರಸಭೆ ದಾಖಲಾತಿಗಳನ್ನು ಸಹ ತೋರಿಸಿದರು. ಶಾಸಕರ ಆಪ್ತ ಸಹಾಯಕ ಹನುಮಂತಪ್ಪ, ಮುಖಂಡರಾದ ವಿಜಯ್‌ಕುಮಾರ್ ಇನ್ನಿತರರಿದ್ದರು.

error: Content is protected !!