ದೊಡ್ಡಬಾತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದ ಎಸ್ ಎಆರ್, ಜಿಎಂಎಸ್
ದಾವಣಗೆರೆ, ಮಾ.21- ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶಾಸಕರ ಅನುದಾನ ಬಳಕೆಗೆ ಹೆಚ್ಚು ಆದ್ಯತೆ ನೀಡಿರುವುದಾಗಿ ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದರು.
ಅವರು, ಇಂದು ತಾಲ್ಲೂಕಿನ ದೊಡ್ಡಬಾತಿ ಗ್ರಾಮದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ 59.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ 5 ಶಾಲಾ ಕೊಠಡಿಗಳ ಪ್ರಾರಂಭಕ್ಕೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕನಾಗಿ ಆಯ್ಕೆಗೊಂಡ ನಂತರ ನನ್ನ ಅವಧಿಯಲ್ಲಿ ಬೇರೆಯವರಂತೆ ರಸ್ತೆಗೆ ಅನುದಾನವನ್ನು ವಿನಿಯೋಗಿಸದೇ ನಾನು ಶಾಸಕನಾಗಿ ಆಯ್ಕೆಯಾದ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆ ಮತ್ತು ಕಾಲೇಜುಗಳನ್ನು ಮೂಲಭೂತ ಸೌಕರ್ಯ ಜೊತೆಗೆ ಸುಸಜ್ಜಿತವಾಗಿ ಅಭಿವೃದ್ಧಿಪಡಿಸುವಲ್ಲಿ ವಿನಿಯೋಗಿಸಿದ್ದೇನೆ. ಮೊದಲಿನಿಂದಲೂ ನಾನು ರಸ್ತೆ ಅಭಿವೃದ್ಧಿಗಿಂತ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ ಅದರಂತೆಯೇ ಕಾರ್ಯ ಪ್ರವೃತ್ತನಾಗಿದ್ದೇನೆ ಎಂದು ಹೇಳಿದರು.
ನಗರದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಬೇಡಿಕೆಯಂತೆ ಅದರ ಪ್ರಾರಂಭಕ್ಕೂ ಒತ್ತು ನೀಡಿದ್ದೆ. ಈಗಲೂ ಸಹ ಆ ಕಾಲೇಜಿನಲ್ಲಿ ಹೆಚ್ಚಿನ ಅಭಿವೃದ್ಧಿಗೆ ಮೂರು ಕೋಟಿ ಅನುದಾನದ ಜೊತೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಏಳು ಕೋಟಿ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ ಈ ಎರಡು ಕಾಲೇಜುಗಳ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ತಂದಿದ್ದು, ಕಾಮಗಾರಿಯೂ ಸಹ ಪ್ರಗತಿಯಲ್ಲಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಬಹಳಷ್ಟು ಹಳೆಯದಾಗಿದ್ದವಲ್ಲದೇ ಶಿಥಿಲಗೊಂಡಿದ್ದವು. ಅಂತಹ ಹಳೆಯ ಶಾಲಾ ಕಟ್ಟಡಗಳನ್ನು ತೆರವುಗೊಳಿಸಿ, ಹೊಸ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗಿದೆ. ಈ ಅಭಿವೃದ್ಧಿ ಕೆಲಸಕ್ಕಾಗಿ ಸಂಸದರ ಅನುದಾನವನ್ನೂ ಸಹ ವಿನಿಯೋಗಿಸಲಾಗಿದೆ ಎಂದರು.
ಕ್ಷೇತ್ರದ ದೊಡ್ಡಬಾತಿ ಗ್ರಾಮಕ್ಕೂ ನನಗೂ ಹೆಚ್ಚು ಒಡನಾಟವಿದ್ದು, ಬಾತಿ ಗುಡ್ಡದಲ್ಲಿ ಹೋರಾಟಗಳನ್ನು ಸಹ ಮಾಡಿದ್ದೇನೆ. ಹೀಗಾಗಿ, ಈ ಭಾಗದ ಜನರ ಸಮಸ್ಯೆಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದೇನೆ. ಮುಂದೆಯೂ ಅಭಿವೃದ್ದಿಗೆ ಶ್ರಮಿಸುತ್ತೇನೆಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಆದಲ್ಲಿ ದೇಶ ಪ್ರಗತಿ ಕಾಣುತ್ತದೆ ಎಂಬ ಆಶಯದೊಂದಿಗೆ ನಾನು ಹಾಗೂ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಗ್ರಾಮೀಣ ಭಾಗಕ್ಕೆ ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ದೊಡ್ಡಬಾತಿ ಗ್ರಾಮವೂ ಶಾಸಕ ಎಸ್.ಎ. ರವೀಂದ್ರನಾಥ ಅವರಿಗೆ ತವರು ಮನೆಯಂತೆ ಆಗಿದೆ. ಈ ಗ್ರಾಮದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಅವರು ತಮ್ಮ ಅನುದಾನವನ್ನು ಹೆಚ್ಚಾಗಿ ನೀಡಿದ್ದಾರೆ ಎಂದರು.
ಸರ್ಕಾರದಿಂದ ನಡೆಯುವ ಕಾಮಗಾರಿಗಳು ಉತ್ತಮವಾಗಿರಬೇಕು. ಬಹುಕಾಲ ಅವುಗಳು ಬಾಳಿಕೆ ಬರಬೇಕಿದೆ. ಈ ಶಾಲಾ ಕೊಠಡಿಗಳ ನಿರ್ಮಾಣ ಚೆನ್ನಾಗಿದ್ದು, ಕಾಮಗಾರಿಗಳನ್ನು ನಡೆಸಿದವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿದ್ಯಾವಂತರಾದರೆ ಏನನ್ನಾದರೂ ಸಾಧಿಸಬಹುದಾಗಿದೆ. ಹಾಗಾಗಿ ಚೆನ್ನಾಗಿ ವಿದ್ಯೆ ಕಲಿತು ಭವಿಷ್ಯದಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕು ಪಂಚಾಯತ್ ಸದಸ್ಯೆ ಆಶಾ ಮುರಳೀಧರ್ ಮಾತನಾಡಿ, ಕೆಲ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅಂತಹ ಶಾಲೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು. ಶೌಚಾಲಯ ಸೇರಿ ದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮುಖ್ಯವಾಗಿ ಪ್ರೌಢಶಾಲೆಗಳಿಗೆ ಅನುದಾನ ತಂದು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದರು.
ಇದೇ ವೇಳೆ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಉಷಾ ಅವರು ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕ ರವೀಂದ್ರನಾಥ್ ಮತ್ತು ಸಂಸದ ಸಿದ್ದೇಶ್ವರ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸುವುದಾಗಿ ರವೀಂದ್ರನಾಥ, ಸಿದ್ದೇಶ್ವರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡಬಾತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೆಸಿಬಿ ಹನುಮಂತಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಸದಸ್ಯೆ ರೇಣುಕಮ್ಮ ಕರಿಬಸಪ್ಪ, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಿ.ಆರ್. ವೀರೇಶ್, ಮಂಜಮ್ಮ ಉಮೇಶ್, ಬಿ. ಸುಲ್ತಾನ್, ಪಂಚಾಯತ್ ರಾಜ್ ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ. ಪುಟ್ಟಸ್ವಾಮಿ, ಬಿ.ಸಿ. ಪುರುಷೋತ್ತಮ, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಆರ್. ರೇವಣಸಿದ್ದಪ್ಪ, ಬಿ. ಸಿದ್ದಪ್ಪ,
ಬಿ.ಜಿ. ಪುಷ್ಪಾವತಿ, ಜಿ.ಆರ್. ನಾಗರಾಜ್, ಹೊನ್ನಪ್ಪ ಸೇರಿದಂತೆ ಇತರರು ಇದ್ದರು.