ಸಂಪುಟಕ್ಕೆ 29 ಸಚಿವರು, ಬಹುತೇಕರು ಹಿಂದಿನ ಸಂಪುಟದಲ್ಲಿದ್ದವರು
ಬೆಂಗಳೂರು, ಆ. 4- ಮಂತ್ರಿಮಂಡಲ ರಚನೆಗೆ ಕಳೆದ ಮೂರು ದಿನಗಳ ಸತತ ಪ್ರಯತ್ನದ ನಂತರ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟಕ್ಕೆ ಕೆಲವು ಹೊಸಬರು ಸೇರಿದಂತೆ 29 ಮಂದಿಯನ್ನು ಸೇರ್ಪಡೆ ಮಾಡಿಕೊಂಡರು.
ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದ ಛಾಯೆಯೇ ಬೊಮ್ಮಾಯಿ ಮಂತ್ರಿಮಂಡಲದಲ್ಲೂ ಮೂಡಿದೆ.
ಯಡಿಯೂರಪ್ಪ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್, ಆರ್. ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಸೇರಿದಂತೆ ಏಳು ಮಂದಿಯನ್ನು ಹೊರತುಪಡಿಸಿ ಉಳಿದ ಎಲ್ಲರೂ ಹಿಂದಿನ ಮಂತ್ರಿಮಂಡಲದಲ್ಲಿದ್ದವರೇ ಈ ಸಂಪುಟದಲ್ಲೂ ಮುಂದುವರೆದಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್, 29 ಮಂದಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. ಯಡಿಯೂರಪ್ಪ ಸಂಪುಟ ದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ, ಸಿ.ಎಸ್. ಅಶ್ವತ್ಥನಾರಾಯಣ, ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಆನಂದ್ ಸಿಂಗ್ ಮತ್ತೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇವರಲ್ಲದೆ, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಕೆ.ಗೋಪಾಲಯ್ಯ, ಎಂ.ಟಿ.ಬಿ. ನಾಗರಾಜ್, ಕೆ.ಸಿ. ನಾರಾಯಣಗೌಡ ಹಾಗೂ ಶಶಿಕಲಾ ಜೊಲ್ಲೆ ಅವರುಗಳು ಬೊಮ್ಮಾಯಿ ಸಂಪುಟದಲ್ಲೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಳೆ ಮುಖಗಳ ಜೊತೆ ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಬಿ. ಪಾಟೀಲ್ ಹಾಗೂ ಮುನಿರತ್ನ ಇದೇ ಮೊದಲ ಬಾರಿಗೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಮುಖ್ಯಮಂತ್ರಿ ಸೇರಿದಂತೆ ಸಂಪುಟ ಗಾತ್ರ 30ಕ್ಕೆ ತಲುಪಿದ್ದು, ಇನ್ನೂ ನಾಲ್ಕು ಸ್ಥಾನಗಳನ್ನು ಬೊಮ್ಮಾಯಿ ಅವರು ಉಳಿಸಿಕೊಂಡಿದ್ದಾರೆ.
ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು, ಬೊಮ್ಮಾಯಿ ಸಂಪುಟದಲ್ಲೂ ನಾಲ್ವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಲು ಬಿಜೆಪಿ ವರಿಷ್ಠರು ತೀರ್ಮಾನ ಕೈಗೊಂಡಿದ್ದರು.
ನೂತನ ಸಚಿವರಿಗೆ ಒಂದೆರಡು ದಿನಗಳಲ್ಲಿ ಖಾತೆಗಳನ್ನು ಹಂಚಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯಾವ ನೂತನ ಸಚಿವರೂ ಹಿಂದಿನ ಖಾತೆ ನೀಡಬೇಕೆಂದು ಮನವಿ ಸಲ್ಲಿಸಿಲ್ಲ. ಈ ಹಿಂದೆ ಹದಿನೈದು ದಿನಗಳವರೆಗೆ ಸಂಪುಟ ರಚನೆಗೆ ಸಮಯ ಬೇಕಾಗುತ್ತಿತ್ತು. ನಾನು ಎರಡೇ ದಿನಗಳಲ್ಲಿ ಸಂಪುಟ ರಚಿಸಿದ್ದೇನೆ. ಖಾತೆ ಹಂಚಿಕೆಯನ್ನೂ ನಾನೇ ಮಾಡುತ್ತೇನೆ ಎಂದವರು ಹೇಳಿದರು.
ಸಚಿವ ಸ್ಥಾನ ಸಿಗದೇ ಅಸಮಾಧಾನ ಉಂಟಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಅಸಮಾಧಾನ ಹೊಂದಿರುವ ಶಾಸಕರ ಜೊತೆ ಮಾತನಾಡುತ್ತೇನೆ. ಅವರು ನಮ್ಮವರೇ. ಮುಂದೆ ಅವಕಾಶ ಬಂದಾಗ ಕಲ್ಪಿಸುತ್ತೇವೆ ಎಂದು ಹೇಳಿದರು.
ಹಿಂದಿನ ಸಂಪುಟದಲ್ಲಿದ್ದ ಕೆಲವರನ್ನು ಕೈ ಬಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಹಿರಿಯರು ಸಂಘಟನೆಯ ಅನುಭವ ಇದ್ದವರಿಗೆ ಪಕ್ಷದ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆ ಎಂದರು. 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಇರುವ ಸಚಿವರಿಗೆ ಆ 13 ಜಿಲ್ಲೆಗಳ ಪ್ರಾತಿನಿಧಿತ್ವ ಕೊಡಲಾಗುವುದು ಎಂದರು.
ವಿಜಯೇಂದ್ರಗೆ ಸಿಗದ ಅವಕಾಶ
ಬೆಂಗಳೂರು, ಆ. 4- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಸೇರ್ಪಡೆಗೊಳಿಸಲು ನಡೆಸಿದ ಯತ್ನ ಫಲಪ್ರದವಾಗಲಿಲ್ಲ.
ಬೊಮ್ಮಾಯಿ ಸಂಪುಟಕ್ಕೆ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಸಚಿವರಾಗಿ ಹಾಗೂ ಆರ್. ಅಶೋಕ್ ಅವರನ್ನು ಉಪಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಲೇಬೇಕೆಂದು ಬೊಮ್ಮಾಯಿ ಅವರಿಗೆ ತಾಕೀತು ಮಾಡಿದ್ದರು, ಅಷ್ಟೇ ಅಲ್ಲ ವರಿಷ್ಠರ ಮುಂದೆಯೂ ತಮ್ಮ ಬೇಡಿಕೆ ಇಟ್ಟಿದ್ದರು.
ಇದೇ ವಿಚಾರಕ್ಕಾಗಿ ಬೊಮ್ಮಾಯಿ ವರಿಷ್ಠರೊಟ್ಟಿಗೆ ಸತತ ಮೂರು ದಿನಗಳ ಕಾಲ ಹೋರಾಟ ನಡೆಸಿದರಾದರೂ ಸಫಲವಾಗಿರಲಿಲ್ಲ.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಯಾರ ಒತ್ತಡ ಎಷ್ಟೇ ಬಂದರೂ ಮಣಿಯದೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣದಿಂದ ವಿಜಯೇಂದ್ರ ಅವರಿಗೆ ಅವಕಾಶ ದೊರೆಯಲಿಲ್ಲ.
ಕೊನೆ ಗಳಿಗೆಯಲ್ಲಾದರೂ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿ ಎಂದು ಮನವಿ ಮಾಡಿಕೊಂಡು ಮುಖ್ಯಮಂತ್ರಿ ಬೆಂಗಳೂರಿಗೆ ಹಿಂತಿರುಗಿದರು.
ಆದರೆ ಬೆಳಿಗ್ಗೆ ಬಂದ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರೂ ಇರಲಿಲ್ಲ, ಉಪಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪವೂ ಇರಲಿಲ್ಲ.
ವರಿಷ್ಠರ ನಿರ್ಧಾರದಿಂದ ಕೋಪೋದ್ರಿಕ್ತರಾದ ಯಡಿಯೂರಪ್ಪ, ತಮ್ಮ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ದೆಹಲಿ ನಾಯಕರಿಗೆ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಮಾತನಾಡಿಸಿ ಸಮಾಧಾನ ಪಡಿಸಿದರು.
ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಹಾ ವಿಜಯೇಂದ್ರ ಅವರೊಂದಿಗೆ ನಗರದಲ್ಲಿ ಮಾತನಾಡಿ ಸಮಾಧಾನ ಪಡಿಸಿದರು.
ಈ ಬೆಳವಣಿಗೆಯಿಂದ ತಮ್ಮ ಆಪ್ತರನ್ನು ಕೊನೆ ಗಳಿಗೆಯಲ್ಲಿ ಮಂತ್ರಿಮಂಡಲಕ್ಕೆ ಸೇರಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು ಎಂದು ಮೂಲಗಳು ಹೇಳಿವೆ.
ದಾವಣಗೆರೆ ಸೇರಿ 13 ಜಿಲ್ಲೆಗಳಿಗೆ ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ
ವಲಸೆ ಉಸ್ತುವಾರಿ ಮತ್ತೆ ಮುಂದುವರಿಕೆ
ಬೆಂಗಳೂರು, ಆ. 4- ಮೈಸೂರು, ಕೊಡಗು, ಹಾಸನ, ದಾವಣಗೆರೆ ಸೇರಿದಂತೆ 13 ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲ.
ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲೂ ಈ ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿರಲಿಲ್ಲ, ಮುಖ್ಯಮಂತ್ರಿ ಸೇರಿದಂತೆ 30 ಮಂದಿ ಸಂಪುಟದಲ್ಲಿ ದ್ದರೂ ಬೆಂಗಳೂರು ನಗರ ಹಾಗೂ ಬೆಳಗಾವಿಗೆ ಹೆಚ್ಚು ಪ್ರಾತಿನಿಧ್ಯ ಗಿಟ್ಟಿಸಿಕೊಂಡು 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಇದಲ್ಲದೆ, ರಾಮನಗರ, ಚಾಮರಾಜನಗರ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೋಲಾರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಅವಕಾಶ ದೊರೆತಿಲ್ಲ. ಹೀಗಾಗಿ ಈ ಜಿಲ್ಲೆಗಳಿಗೆ ಹೊರ ಜಿಲ್ಲೆಗಳ ವಲಸಿಗರೇ ಉಸ್ತುವಾರಿ ಸಚಿವರಾಗಲಿದ್ದಾರೆ.
ಬೆಂಗಳೂರು ನಗರಕ್ಕೆ 8 ಸ್ಥಾನ ದೊರೆತಿದ್ದರೆ, ಬೆಳಗಾವಿ, ತುಮಕೂರು, ಶಿವಮೊಗ್ಗ, ಬಾಗಲಕೋಟೆ, ದಕ್ಷಿಣ ಕನ್ನಡ, ಹಾವೇರಿ ಜಿಲ್ಲೆಗಳಿಗೆ ಸಂಪುಟದಲ್ಲಿ ತಲಾ ಎರಡು ಸ್ಥಾನಗಳು ದೊರೆತಿವೆ.
ನೂತನ ಮಂತ್ರಿಮಂಡಲದಲ್ಲಿ ಬೊಮ್ಮಾಯಿ ಸೇರಿದಂತೆ ಎಂಟು ಮಂದಿ ಲಿಂಗಾಯತರಿಗೆ ಅವಕಾಶ ದೊರೆತಿದ್ದರೆ, ನಂತರ ಒಕ್ಕಲಿಗ ಹಾಗೂ ಹಿಂದುಳಿದ ಸಮುದಾಯಕ್ಕೆ ತಲಾ ಏಳು, ಪರಿಶಿಷ್ಟ ಜಾತಿ ಮೂರು, ಪರಿಶಿಷ್ಟ ವರ್ಗಕ್ಕೆ ಸೇರಿದ ಒಬ್ಬರು, ಇಬ್ಬರು ಬ್ರಾಹ್ಮಣ ಸಮುದಾಯದವರಿಗೆ ಮಂತ್ರಿಗಿರಿ ಲಭಿಸಿದೆ.
ಮುಖ್ಯಮಂತ್ರಿ ಆಪ್ತ ಆರ್. ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿಸಲು ಬೊಮ್ಮಾಯಿ ಕೊನೆವರೆಗೆ ನಡೆಸಿದ ಯತ್ನ ವಿಫಲವಾದ ನಂತರ ಸದ್ಯಕ್ಕೆ ಯಾರನ್ನೂ ಉಪಮುಖ್ಯಮಂತ್ರಿ ಮಾಡುವುದು ಬೇಡ ಎಂದು ವರಿಷ್ಠರಿಗೆ ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ನಿರ್ಧಾರವನ್ನು ಕೈಬಿಡಲಾಗಿದೆ.
ಮೂರು ದಿನಗಳಿಂದ ಮಂತ್ರಿಮಂಡಲ ರಚನೆಗೆ ಮುಖ್ಯಮಂತ್ರಿ ಅವರು, ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರಾದರೂ ಇಂದು ಬೆಳಗ್ಗೆ 10 ಗಂಟೆಗೆ ಸದಸ್ಯರ ಪಟ್ಟಿ ಅಂತಿಮಗೊಂಡು ಬೊಮ್ಮಾಯಿ ಕೈಸೇರಿತು.
ಪಟ್ಟಿ ಕೈಸೇರುವ ವೇಳೆಗೆ ರಾತ್ರಿ ಇದ್ದ ಆರು ಹೆಸರುಗಳು ಮಾಯವಾಗಿ ಯಡಿಯೂರಪ್ಪನವರ ಶಿಫಾರಸ್ಸಿನಂತೆ ಕೆಲವರು ಹಳಬರನ್ನೇ ಮುಂದುವರೆಸಲು ವರಿಷ್ಠರು ತೀರ್ಮಾನಿಸಿದರು.
ಇದರಿಂದ ಮಂತ್ರಿಯಾಗುವಂತೆ ನಿನ್ನೆ ರಾತ್ರಿ ಪರೋಕ್ಷ ಸೂಚನೆ ಪಡೆದಿದ್ದವರ ಹೆಸರು ಇಂದು ಬೆಳಗಾಗುವ ವೇಳೆಗೆ ಪಟ್ಟಿಯಿಂದ ಮಾಯವಾಗಿತ್ತು.
ಮಾಯವಾದವರ ಪಟ್ಟಿಯಲ್ಲಿದ್ದ ಎಸ್.ಎ. ರಾಮದಾಸ್, ದತ್ತಾತ್ರೇಯ ಪಾಟೀಲ್ ರೇವೂರ, ರಾಜೂಗೌಡ, ಆರ್.ಪೂರ್ಣಿಮಾ ಶ್ರೀನಿವಾಸ್, ಎಂ.ಪಿ. ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೆ ನಿರಾಸೆ ಕಾದಿತ್ತು.
ಸಂಘ ಪರಿವಾರದಿಂದ ರೇಣುಕಾಚಾರ್ಯ ಹೊರತುಪಡಿಸಿ, ಉಳಿದವರ ಹೆಸರನ್ನು ವರಿಷ್ಠರಿಗೆ ಶಿಫಾರಸ್ಸು ಮಾಡಲಾಗಿತ್ತು.
ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಮಂತ್ರಿಯಾಗುವ ಅವಕಾಶ ತಪ್ಪಿದ್ದರಿಂದ ಕೊನೆ ಗಳಿಗೆಯಲ್ಲಿ ಅವರ ಬೆಂಬಲಿಗರಾಗಿ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಎಂ.ಟಿ.ಬಿ. ನಾಗರಾಜ್, ಶಿವರಾಂ ಹೆಬ್ಬಾರ್, ಮುನಿರತ್ನ ಅವರಿಗೆ ಅವಕಾಶ ನೀಡುವಂತೆ ಮಾಡಿದ ಶಿಫಾರಸ್ಸಿಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದರಿಂದ ಅಧಿಕಾರ ದಕ್ಕಿತು.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ ಶಾಸಕರು, ನೂತನ ಸಚಿವರ ಕುಟುಂಬದವರು ಹಾಜರಿದ್ದರು.