ಇಂದಿನಿಂದ ಶೈಕ್ಷಣಿಕ ವರ್ಷಾರಂಭ

ದಾವಣಗೆರೆ, ಜೂ.14- ಕೊರೊನಾ ಎರಡನೇ ಅಲೆಯ ಸಂಕಷ್ಟ ಹಾಗೂ 3ನೇ ಅಲೆಯ ಭೀತಿ ನಡುವೆಯೇ ಶಾಲೆಗಳು ಆರಂಭ ವಾದರೆ ಸಾಕು ಎನ್ನುತ್ತಿದ್ದ  ಪೋಷ ಕರು, ಇದೀಗ ಶಾಲಾ ಶುಲ್ಕ ಭರಿಸು ವಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಶೇ.70ರಷ್ಟು ಶುಲ್ಕ ಮಾತ್ರ ಪಡೆಯುವಂತೆ ಖಾಸಗಿ ಶಾಲಾ ಶಿಕ್ಷಣ ಮಂಡಳಿಗಳಿಗೆ ಸರ್ಕಾರ ಆದೇಶ ನೀಡಿತ್ತು. ಆದರೆ ಆ ಆದೇಶ ಈ ವರ್ಷಕ್ಕಲ್ಲ ಎನ್ನುತ್ತಿರುವ ಶಿಕ್ಷಣ ಸಂಸ್ಥೆಗಳು ಪೂರ್ತಿ ಶುಲ್ಕ ಕೇಳಲಾರಂಭಿಸಿವೆ. ಈ ಹಗ್ಗ-ಜಗ್ಗಾಟ ಪೋಷಕರ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಮಕ್ಕಳ ಭವಿಷ್ಯಕ್ಕಾಗಿ ಎಷ್ಟೇ ಶುಲ್ಕವಾದರೂ ಸರಿ ನೀಡಿ ಅತ್ಯುತ್ತಮ ಶಾಲೆಗೆ ಸೇರಿಸುತ್ತೇವೆಂಬ ಪೋಷ ಕರು, ಈಗಾಗಲೇ ಹಣ ಹಿಡಿದು ನೋಂದಣಿಗೆ ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಮೊದಲ ಹಾಗೂ ಎರಡನೇ ಕೊರೊನಾ ಅಲೆಗಳಲ್ಲಿ ಮುಳುಗೆದ್ದ ಬಡ ಹಾಗೂ ಮಧ್ಯಮ ವರ್ಗದ ಪೋಷಕರಿಗೆ ಶುಲ್ಕ ಭರಿಸು ವುದು ಸವಾಲಿನ ಕೆಲಸವಾಗಿದೆ.

ಏತನ್ಮಧ್ಯೆ ಸರ್ಕಾರ 2021-22 ನೇ ಸಾಲಿನ ಶೈಕ್ಷಣಿಕ ವರ್ಷ  ಜೂ. 15ರಿಂದ ಆರಂಭವಾಗಲಿದ್ದು,  ಶಾಲೆ ಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಶಿಕ್ಷಕರು ಶಾಲೆಗಳಿಗೆ ತೆರಳಿ ಸ್ವಚ್ಛತೆ, ಪ್ರವೇಶ ಪ್ರಕ್ರಿಯೆ ಸೇರಿದಂತೆ ಶಾಲಾ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 30ರವರೆಗೆ ಕಾಲಾವಕಾಶ ವನ್ನೂ ನೀಡಿತ್ತು. ಆದರೆ ದಾವಣಗೆರೆ ಸೇರಿ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿದ ಪರಿಣಾಮ ಲಾಕ್‌ ಡೌನ್ ನಂತರ ಶಿಕ್ಷಕರು ಶಾಲೆಗೆ ತೆರಳು ವಂತೆ ಮಾರ್ಪಾಡು ಮಾಡಿ ಸೋಮವಾರ ಆದೇಶ ಹೊರಡಿಸಿದೆ. 

ಸೋಮವಾರ ದಾವಣಗೆರೆ ನಗರದ ಬಹುತೇಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಪೋಷಕರೂ ಸಹ ಶುಲ್ಕದ ಬಗ್ಗೆ ವಿಚಾರಿಸಲಾರಂಭಿಸಿದ್ದಾರೆ.

ಸಂಕಷ್ಟದಲ್ಲಿ ಎರಡನೇ ಹಂತದ ಖಾಸಗಿ ಶಿಕ್ಷಣ ಸಂಸ್ಥೆಗಳು: ಸರ್ಕಾರ ಆದೇಶಿಸಿದರೆ ಈ ವರ್ಷವೂ ನಾವು ಶೇ.70ರಷ್ಟು ಶುಲ್ಕ ಪಡೆಯಲು ಸಿದ್ಧರಿದ್ದೇವೆ. ಆದರೆ ಶೇ.70ರಷ್ಟು ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವಂತೆ ಪೋಷಕರಿಗೂ ಮನವಿ ಮಾಡಬೇಕು ಎಂದು ರೂಪ್ಸಾ (ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ) ಉಪಾಧ್ಯಕ್ಷ ಮಂಜುನಾಥ ಅಗಡಿ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸರ್ಕಾರದ ಆದೇಶದಂತೆ ಶೇ.70ರಷ್ಟು ಶುಲ್ಕ ಪಡೆಯಲು ಸಿದ್ಧರಿದ್ದೆವು. ಆದರೆ ಬಹುತೇಕ ಶಾಲೆಗಳಲ್ಲಿ ಪೋಷಕರು ಶೇ.10ರಷ್ಟು ಶುಲ್ಕವನ್ನೂ ಭರಿಸಿಲ್ಲ. ಆದಾಗ್ಯೂ ನಾವು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗೆ ನೀಡಬೇಕಾದ ಶಿಕ್ಷಣ ಸೌಲಭ್ಯ ಒದಿಗಿಸಿದ್ದೇವೆ. ಶಿಕ್ಷಕರಿಗೆ ವೇತನ ನೀಡಿದ್ದೇವೆ ಎಂದರು.

ಕಾರ್ಪೋರೇಟ್ ಶಾಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿರುವ ಸಾವಿರಾರು ಬಜೆಟ್ ಶಾಲೆಗಳು ತೀವ್ರ ಸಂಕಷ್ಟದಲ್ಲಿವೆ. ಬಜೆಟ್ ಶಾಲಾ ಸಂಸ್ಥೆಗಳ ಕಾರ್ಯದರ್ಶಿಗಳು, ಅಧ್ಯಕ್ಷರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ನಿಗದಿತ ಶುಲ್ಕವನ್ನಾದರೂ ಪೂರ್ಣವಾಗಿ ಕಟ್ಟುವಂತೆ ಪೋಷಕರಿಗೆ ಸೂಚಿಸಬೇಕು ಎಂದರು.

ಕೆಲವೇ ಕಾರ್ಪೊರೇಟ್ ಶಾಲೆಗಳು ಲಕ್ಷಗಟ್ಟಲೆ ಶುಲ್ಕ ಪಡೆಯುವುದನ್ನು ಕಂಡು ಇಡೀ ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲಾ ಹೆಚ್ಚು ಶುಲ್ಕ ಪಡೆಯುತ್ತಿವೆ ಎಂದು ದೂರುವುದು ಸರಿಯಲ್ಲ ಎಂದ ಮಂಜುನಾಥ್, ಆಯಾ ಪ್ರದೇಶಗಳಿಗನುಗುಣವಾಗಿ ಖಾಸಗಿ ಶಾಲೆಗಳು ಕಡಿಮೆ ಶುಲ್ಕ ನಿರ್ಧರಿಸಿವೆ. ಕಂತಿನ ರೂಪದಲ್ಲೂ ಶುಲ್ಕ ಪಡೆಯುತ್ತಿವೆ.

ಆದರೆ ಪೋಷಕರು ಶುಲ್ಕ ಕಟ್ಟದ ಪರಿಣಾಮ ಶಿಕ್ಷಕರಿಗೆ ವೇತನ ನೀಡಲಾಗದೆ, ಪಾಠ ಮಾಡುತ್ತಿದ್ದ ಶಿಕ್ಷಕರು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಕಾರ್ಪೊರೇಟ್ ಶಾಲೆಗಳ ಕಾನೂನನ್ನು ಬಜೆಟ್ ಶಾಲೆ ಮೇಲೆ ಹಾಕುವ ಮೂಲಕ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದರಿಂದ ಉಳ್ಳವರು ಮಾತ್ರ ಶಿಕ್ಷಣ ಸಂಸ್ಥೆ ನಡೆಸುವಂತಾಗಿದೆ ಎಂದರು.

ಜಿಲ್ಲೆಯಲ್ಲಿ 424 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 143 ಪ್ರೌಢಶಾಲೆಗಳು ಸೇರಿ ಒಟ್ಟು 567 ಶಾಶ್ವತ ಅನುದಾನ ರಹಿತ ಶಾಲೆಗಳಿವೆ.

ಇವುಗಳಲ್ಲಿ ಮೊದಲ ಹಂತದ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಕಟ್ಟಿಸಿಕೊಳ್ಳುತ್ತಿವೆ. ಆದರೆ ಎರಡನೇ ಹಂತದಲ್ಲಿರುವ ಶಾಲೆಗಳು ಕಳೆದ ವರ್ಷದ ಶುಲ್ಕವನ್ನೇ ಪಡೆಯುತ್ತಿವೆ. ಅಲ್ಲದೇ ಕಂತಿನ ಸೌಲಭ್ಯಗಳನ್ನೂ ನೀಡಿವೆ.

ಈಗಾಗಲೇ ಸಂಕಷ್ಟದಲ್ಲಿನ ಕೆಲ ಖಾಸಗಿ ಶಾಲೆಗಳಲ್ಲಿ ಪೋಷಕರು ಶೇ.50ರಷ್ಟು ಶುಲ್ಕವನ್ನು ಕಟ್ಟಿದರೂ ಸಾಕು ಎನ್ನುವಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ  ತ್ಯಾವಣಗಿ ವೀರಭದ್ರಸ್ವಾಮಿ.

ಲಸಿಕೆ ವಂಚಿತ ಶಿಕ್ಷಕರು: ನಗರ ಪ್ರದೇಶದಲ್ಲಿ ಕೆಲವೇ ಶಿಕ್ಷಕರನ್ನು ಹೊರತುಪಡಿಸಿದರೆ ಬಹುತೇಕ ಶಿಕ್ಷಕರಿಗೆ ಕೋವಿಡ್ ಲಸಿಕೆ ದೊರೆತಿಲ್ಲ. ಸರ್ಕಾರ ಕೂಡಲೇ ಶಿಕ್ಷಕರಿಗೆ ಲಸಿಕೆ ನೀಡಬೇಕು ಎಂದು ಮಂಜುನಾಥ ಅಗಡಿ ಹಾಗೂ ತ್ಯಾವಣಗಿ ವೀರಭದ್ರಸ್ವಾಮಿ ಒತ್ತಾಯಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರಿಗೆ ಲಸಿಕೆ ಪಡೆಯಲು ತೆರಳಿದರೆ ನಮಗೆ ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇದೀಗ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಿಕ್ಷಕರಿಗೆ ಲಸಿಕೆ ಅತ್ಯಗತ್ಯ ಎಂದವರು ಹೇಳಿದ್ದಾರೆ.


ಇಂದಿನಿಂದ ಶೈಕ್ಷಣಿಕ ವರ್ಷಾರಂಭ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!