ಕೊರೊನಾ : ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಲಯನ್ಸ್‌ನಿಂದ ಉಚಿತ ಶಿಕ್ಷಣ

ಕೊರೊನಾ : ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಲಯನ್ಸ್‌ನಿಂದ ಉಚಿತ ಶಿಕ್ಷಣ - Janathavaniಯುನಿಟಿ ಹೆಲ್ತ್ ಸೆಂಟರ್‌ ಸಹಯೋಗ – ಡಾ. ಬಿ.ಎಸ್.ನಾಗಪ್ರಕಾಶ್

ದಾವಣಗೆರೆ, ಜೂ.14- ಮನುಷ್ಯ ಸಂಬಂಧಗಳ ನಡುವೆ `ಅಂತರ’ ಸೃಷ್ಟಿಸಿರುವ ಕೊರೊನಾ ಕಾಲಘಟ್ಟದಲ್ಲಿ ಈ ಸೋಂಕುವಿನಿಂದ ಪಾಲಕರನ್ನು ಕಳೆದುಕೊಂಡಿರುವ ದಾವಣಗೆರೆ ಜಿಲ್ಲೆಯ ಅಶಕ್ತ ಮಕ್ಕಳಿಗೆ ನೆರವು ನೀಡುವ ನಿಟ್ಟಿನಲ್ಲಿ ಉಚಿತ ಶಿಕ್ಷಣ ನೀಡಲು ದಾವಣಗೆರೆ ಲಯನ್ಸ್ ಕ್ಲಬ್ ಮುಂದಾಗಿದೆ.

ಜಿಲ್ಲೆಯ ಹಿರಿಯ ವೈದ್ಯರೂ ಆಗಿರುವ ಸಮಾಜ ಸೇವಕ ಡಾ. ಬಿ.ಎಸ್.ನಾಗಪ್ರಕಾಶ್ ಅವರ ಒಡೆತನದ ಯುನಿಟಿ ಹೆಲ್ತ್ ಸೆಂಟರ್ ಸಹಯೋಗ ಮತ್ತು ಲಯನ್ಸ್ ಕ್ಲಬ್‌ನ ಎಲ್ಲಾ ಸರ್ವ ಸದಸ್ಯರ ಸಹಕಾರ ದೊಂದಿಗೆ ಅಶಕ್ತ ಮಕ್ಕಳ ಸಹಾಯಕ್ಕೆ ಲಯನ್ಸ್ ಕ್ಲಬ್ ಕೈ ಚಾಚಿದೆ.

ಡಾ. ನಾಗಪ್ರಕಾಶ್ ಅವರು ನೀಡುವ ವೈಯಕ್ತಿಕ ಎರಡು ಲಕ್ಷ ರೂ.ಗಳ ಜೊತೆಗೆ, ಇತರೆ ಸದಸ್ಯರು ಕೊಡುವ ಧನ ಸಹಾಯವನ್ನು ಒಟ್ಟುಗೂಡಿಸಿ, ಅಶಕ್ತ ಮಕ್ಕಳ ಅರ್ಜಿಗಳನ್ನು ಆಧರಿಸಿ, ಹಣ ಹಂಚಿಕೆ ಮಾಡಿದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, ಅದರ ಬಾಂಡ್ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ನೀಡ ಲಾಗುತ್ತದೆ. ಮಕ್ಕಳು 18 ವರ್ಷವಾದ ಬಳಿಕ ಹಣದ ಲಾಭ ಪಡೆಯಬಹುದಾಗಿದೆ.

ಇಂದಿಲ್ಲಿ ಲಯನ್ಸ್ ಕ್ಲಬ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಡಾ. ನಾಗಪ್ರಕಾಶ್, ಮಕ್ಕಳಿಗೆ ಒಂದರಿಂದ ಎಸ್ಸೆಸ್ಸೆಲ್ಸಿ ವರೆಗೆ ಉಚಿತ ಶಿಕ್ಷಣದೊಂದಿಗೆ ಸಮವಸ್ತ್ರ, ಪಠ್ಯ-ಪುಸ್ತಕ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಅರ್ಹ ಅಶಕ್ತ ಮಕ್ಕಳು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಡಾ. ಬಿ.ಎಸ್.ನಾಗಪ್ರಕಾಶ್, ಯುನಿಟಿ ಹೆಲ್ತ್ ಸೆಂಟರ್, 5ನೇ ತಿರುವು ಪಿ.ಜೆ.ಬಡಾವಣೆ, ದಾವಣಗೆರೆ, (98440-63504) ಅಥವಾ ಎನ್.ವಿ.ಬಂಡಿವಾಡ (94480-43560) ಅಥವಾ ಬೆಳ್ಳೂಡಿ ಶಿವಕುಮಾರ್ (94481-19815) ಅವರನ್ನು ಸಂಪರ್ಕಿಸಬಹುದು. 

ಅರ್ಹ ಅಶಕ್ತ ಮಕ್ಕಳು ತಂದೆ-ತಾಯಿ ಕೊರೊನಾ ಸೋಂಕಿವಿನಿಂದ ಮೃತ ಪಟ್ಟ ಬಗ್ಗೆ ಮರಣ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪೂರ್ಣ ವಿಳಾಸ ನೀಡಬೇಕು. ಮಕ್ಕಳ ಆಧಾರ್ ಕಾರ್ಡ್, ಓದುತ್ತಿರುವ ಶಾಲೆ ಮತ್ತು ವಿದ್ಯಾಭ್ಯಾಸದ ದೃಢೀಕರಣ ಪತ್ರ ಸಲ್ಲಿಸಬೇಕು. ಪಾಲಕರಿಂದ ಲಯನ್ಸ್ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಒಪ್ಪಿಗೆ ಪ್ರಮಾಣ ಪತ್ರ ತರಬೇಕು. ಅರ್ಜಿ ಸಲ್ಲಿಸಲು ಇದೇ ದಿನಾಂಕ 21 ಕೊನೆಯ ದಿನವಾಗಿದೆ ಎಂದು ಅವರು ವಿವರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ
ಎಸ್.ಓಂಕಾರಪ್ಪ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ವೈ.ಬಿ.ಸತೀಶ್, ಎನ್.ವಿ.ಬಂಡಿವಾಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!